ಬೆಂಗಳೂರು | ಮೆಟ್ರೋದಲ್ಲಿ ಮಹಿಳೆಯರ ಫೊಟೋ, ವಿಡಿಯೋ ಕ್ಲಿಕ್ಕಿಸಿ ಇನ್ಸ್ಟಾಗ್ರಾಂನಲ್ಲಿ ಅಪ್‍ಲೋಡ್ : ಎಫ್‍ಐಆರ್ ದಾಖಲು
ಸಾಂದರ್ಭಿಕ ಚಿತ್ರ | PC: Meta AI
ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ ಸಂಚರಿಸುವ ಮಹಿಳಾ ಪ್ರಯಾಣಿಕರ ಫೋಟೋ, ವಿಡಿಯೋಗಳನ್ನು ರಹಸ್ಯವಾಗಿ ಕ್ಲಿಕ್ಕಿಸಿ ಇನ್ಸ್ಟಾಗ್ರಾಂನಲ್ಲಿ ಅಪ್‍ಲೋಡ್ ಮಾಡುತ್ತಿದ್ದ ಆರೋಪಿಯ ವಿರುದ್ಧ ಇಲ್ಲಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
5 ಸಾವಿರಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿರುವ ಇನ್ಸ್ಟಾಗ್ರಾಂ ಖಾತೆಯಲ್ಲಿ ಎಪ್ರಿಲ್ 11ರಿಂದಲೂ ವಿಡಿಯೋ, ಫೋಟೋಗಳನ್ನು ಅಪ್‍ಲೋಡ್ ಮಾಡಲಾಗಿದ್ದು, ಈ ಬಗ್ಗೆ ಗಮನಿಸಿರುವ ಬನಶಂಕರಿ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ದಿನನಿತ್ಯ ಸಾವಿರಾರು ಮಹಿಳಾ ಪ್ರಯಾಣಿಕರು ಮೆಟ್ರೋ ರೈಲುಗಳನ್ನು ಬಳಸುತ್ತಾರೆ. ಅಂತಹವರ ನಡುವೆ ಪ್ರಯಾಣಿಕರ ಸೋಗಿನಲ್ಲಿ ಬಂದಿರುವ ಕೆಲ ಕಿಡಿಗೇಡಿಗಳು ಮೆಟ್ರೋ ನಿಲ್ದಾಣಗಳು ಹಾಗೂ ರೈಲಿನೊಳಗೆ ರಹಸ್ಯವಾಗಿ ಹೆಣ್ಣುಮಕ್ಕಳ ಅಸಂಬದ್ಧ ಫೋಟೋ, ವಿಡಿಯೋಗಳನ್ನು ಕ್ಲಿಕ್ಕಿಸಿರುವುದಲ್ಲದೇ ಅಶ್ಲೀಲ ಕ್ಯಾಪ್ಷನ್ ನೀಡಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್‍ಲೋಡ್ ಮಾಡುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಪೊಲೀಸರು ತಿಳಿಸಿದ್ದಾರೆ.