ಬೆಂಗಳೂರಿನ ಪಿಜಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ: 23 ಪಿಜಿಗಳಿಗೆ ನೋಟಿಸ್
ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ರಾಜಧಾನಿಯ ವಿವಿಧ ಪೇಯಿಂಗ್ ಗೆಸ್ಟ್ (ಪಿಜಿ)ಗಳಲ್ಲಿ ನೀಡಲಾಗುತ್ತಿರುವ ಆಹಾರದ ಕಳಪೆ ಗುಣಮಟ್ಟ ಹಾಗೂ ನೈರ್ಮಲ್ಯದ ಕೊರತೆ ಕುರಿತು ಸಾರ್ವಜನಿಕರಿಂದ ಬಂದ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ, ಆಹಾರ ಸುರಕ್ಷತಾ ಇಲಾಖೆಯು ಶುಕ್ರವಾರ ಬೃಹತ್ ವಿಶೇಷ ತಪಾಸಣಾ ಕಾರ್ಯಾಚರಣೆ ಕೈಗೊಂಡಿದೆ.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗದ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದು, ಬೆಂಗಳೂರು ನಗರ, ಬೆಂ.ಗ್ರಾಮಾಂತರ ಹಾಗೂ ಜಿಬಿಎ ವ್ಯಾಪ್ತಿಯ ಒಟ್ಟು 64 ಪಿಜಿಗಳಿಗೆೆ ಏಕಕಾಲದಲ್ಲಿ ಭೇಟಿ ನೀಡಿ ತಪಾಸಣೆ ನಡೆಸಿ, ನೈರ್ಮಲ್ಯದ ಕೊರತೆ ಹಾಗೂ ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಒಟ್ಟು 23 ಪಿಜಿಗಳಿಗೆ ಅಧಿಕಾರಿಗಳು ಸ್ಥಳದಲ್ಲೇ ನೋಟಿಸ್ ಜಾರಿ ಮಾಡಿದ್ದಾರೆ.
ಪಿಜಿಗಳಲ್ಲಿ ನೀಡಲಾಗುವ ಆಹಾರದ ಗುಣಮಟ್ಟ ಪರಿಶೀಲಿಸಲು 12 ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕೆಲವು ಪಿಜಿಗಳಲ್ಲಿ ಅವಧಿ ಮೀರಿದ ಮೊಸರು, ರೈಸ್ ಫ್ಲೋರ್, ಕಾಳುಮೆಣಸು, ಕೃತಕ ಆಹಾರ ಬಣ್ಣ, ಬಿಸಿಬೇಳೆ ಬಾತ್ ಪೌಡರ್ ಹಾಗೂ ನಿಯಮಬಾಹಿರ ಮಿಕ್ಸ್ಚರ್‌ಗಳನ್ನು ಪತ್ತೆಹಚ್ಚಿ ಜಪ್ತಿ ಮಾಡಲಾಗಿದೆ.
ಊಟದ ಮೇಜಿನ ಮೇಲೆ ಬೆಡ್ ಬಗ್ ಪೌಡರ್! ಪಿಜಿ ಡೈನಿಂಗ್ ಏರಿಯಾ ಸೀಲ್:
ಬೊಮ್ಮಸಂದ್ರದ 'ನಂದನ ಎಲೈಟ್ ಪಿಜಿ’ ಮೇಲೆ ದಾಳಿ ನಡೆಸಿದಾಗ, ಊಟದ ಮೇಜಿನ ಮೇಲೆ ಆಹಾರ ಪದಾರ್ಥಗಳ ಜೊತೆಗೆ ಬೆಡ್ ಬಗ್ಸ್ (ತಿಗಣೆ) ಪೌಡರ್ ಇಟ್ಟಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ, ಕುಡಿಯುವ ನೀರಿನ ವ್ಯವಸ್ಥೆ ಇರುವ ಜಾಗದಲ್ಲಿ ಅನುಪಯುಕ್ತ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ತೀವ್ರ ಅನೈರ್ಮಲ್ಯ ಉಂಟಾಗಿದ್ದರಿಂದ, ಅಧಿಕಾರಿಗಳು ತಕ್ಷಣವೇ ಈ ಪಿಜಿಯ ಡೈನಿಂಗ್ ಏರಿಯಾವನ್ನು ಸೀಲ್ ಮಾಡಿದ್ದಾರೆ.
ಇಲಾಖೆಯ ಎಚ್ಚರಿಕೆ:
ಪಿಜಿ ಮಾಲಕರು ಮತ್ತು ಆಹಾರ ತಯಾರಕರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಗುಣಮಟ್ಟದ ಕಚ್ಚಾ ವಸ್ತುಗಳ ಬಳಕೆ, ಅಡುಗೆಮನೆಯ ಸ್ವಚ್ಛತೆ ಹಾಗೂ ಅವಧಿ ಮುಗಿದ ವಸ್ತುಗಳ ಬಳಕೆಯನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಹಾರ ಸುರಕ್ಷತಾ ಇಲಾಖೆಯ ಆಯುಕ್ತ ಶ್ರೀನವಾಸ್ ಎಚ್ಚರಿಸಿದ್ದಾರೆ.