ನಗರ ಪಾಲಿಕೆ ಮಟ್ಟದಲ್ಲಿ ಪೊಲೀಸ್-ಪಾಲಿಕೆ ಜಂಟಿ ಟಾಸ್ಕ್ ಫೋರ್ಸ್: ಕೃಷ್ಣಬೈರೇಗೌಡ
‘ಪಾದಚಾರಿ ಮಾರ್ಗಗಳ ಮರು ಒತ್ತುವರಿ ತಡೆಗೆ ಕ್ರಮ’
ಬೆಂಗಳೂರು : ನಗರಾದ್ಯಂತ ತೆರವುಗೊಳಿಸಿದ ಪಾದಚಾರಿ ಮಾರ್ಗಗಳಲ್ಲಿ ಮರು ಒತ್ತುವರಿ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತಿ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ಹಾಗೂ ಪಾಲಿಕೆ ಅಧಿಕಾರಿಗಳನ್ನು ಒಳಗೊಂಡ ಜಂಟಿ ಟಾಸ್ಕ್ ಫೋರ್ಸ್ ರಚಿಸಿ, ನಿರಂತರ ಮೇಲ್ವಿಚಾರಣೆ ಹಾಗೂ ಜಂಟಿ ಕಾರ್ಯಾಚರಣೆ ನಡೆಸಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪಾದಚಾರಿ ಮಾರ್ಗಗಳ ಒತ್ತುವರಿ ಕುರಿತು ಶುಕ್ರವಾರ ನಡೆದ ವರ್ಚುವಲ್ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಒತ್ತುವರಿ ತೆರವುಗೊಳಿಸಿದ ಬಳಿಕ ಮತ್ತೆ ಅದೇ ಸ್ಥಳದಲ್ಲಿ ಮರು ಒತ್ತುವರಿ ನಡೆಯುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣ ಬೈರೇಗೌಡ ನಿರ್ದೇಶನ ನೀಡಿದರು.
ಪ್ರತಿ ನಗರಪಾಲಿಕೆ ವ್ಯಾಪ್ತಿಯಲ್ಲಿ ಪೊಲೀಸ್ ಮತ್ತು ಪಾಲಿಕೆ ಅಧಿಕಾರಿಗಳ ಸಮನ್ವಯದೊಂದಿಗೆ ಜಂಟಿ ಟಾಸ್ಕ್ ಫೋರ್ಸ್ ರಚಿಸಬೇಕು. ತೆರವುಗೊಳಿಸಿದ ಪಾದಚಾರಿ ಮಾರ್ಗಗಳಲ್ಲಿ ನಿಯಮಿತ ಹಾಗೂ ಅನಿರೀಕ್ಷಿತ ಪರಿಶೀಲನೆ ನಡೆಸಿ, ಮರು ಒತ್ತುವರಿ ಕಂಡುಬಂದ ಕೂಡಲೇ ಸ್ಥಳದಲ್ಲೇ ಕ್ರಮ ಕೈಗೊಳ್ಳುವ ವ್ಯವಸ್ಥೆ ರೂಪಿಸಬೇಕು ಎಂದು ಕೃಷ್ಣ ಬೈರೇಗೌಡ ಸೂಚಿಸಿದರು.
ಮರು ಒತ್ತುವರಿ ಪ್ರಕರಣಗಳನ್ನು ತಕ್ಷಣ ಗುರುತಿಸಿ, ಫೋಟೋ ಹಾಗೂ ಜಿಯೋ-ಟ್ಯಾಗ್ ಮಾಹಿತಿಯೊಂದಿಗೆ ವರದಿ ಮಾಡುವ ವ್ಯವಸ್ಥೆ ಮಾಡಬೇಕು. ಮಾರ್ಷಲ್‍ಗಳು ಹಾಗೂ ಬೀಟ್ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ನಿಯಮಿತವಾಗಿ ಪರಿಶೀಲನೆ ನಡೆಸಬೇಕು ಎಂದು ಕೃಷ್ಣ ಬೈರೇಗೌಡ ನಿರ್ದೇಶನ ನೀಡಿದರು.
ಒತ್ತುವರಿ ತೆರವುಗೊಳಿಸಿದ್ದೇವೆ ಎಂದು ಹೇಳುವುದಷ್ಟೇ ಸಾಕಾಗುವುದಿಲ್ಲ. ತೆರವುಗೊಳಿಸಿದ ಸ್ಥಳದಲ್ಲಿ ಮತ್ತೆ ಒತ್ತುವರಿ ಆಗದಂತೆ ನಿರಂತರ ಮೇಲ್ವಿಚಾರಣೆ ನಡೆಸಬೇಕು. ಮರು ಒತ್ತುವರಿ ಮಾಡುವ ಪುನರಾವರ್ತಿತ ಉಲ್ಲಂಘನಾಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿ, ಮೆಟೀರಿಯಲ್ ವಶಪಡಿಸಿಕೊಂಡು, ನಿಯಮಾನುಸಾರ ಹೆಚ್ಚಿನ ದಂಡ ವಿಧಿಸಬೇಕು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಈ ಸಂಬಂಧ ಅಧಿಕಾರಿಗಳ ಜವಾಬ್ದಾರಿಯನ್ನು ಸ್ಪಷ್ಟವಾಗಿ ನಿಗದಿಪಡಿಸಿ, ಕೈಗೊಂಡ ಕ್ರಮಗಳ ಕುರಿತು ನಿಯಮಿತವಾಗಿ ಪ್ರಗತಿ ವರದಿ ಪರಿಶೀಲಿಸಬೇಕು. ಸ್ಟ್ರೀಟ್ ವೆಂಡಿಂಗ್‍ಗೆ ಸಂಬಂಧಿಸಿದಂತೆ ವೆಂಡಿಂಗ್‍ಗೆ ನಿರ್ಬಂಧಿತ ರಸ್ತೆಗಳ ಕುರಿತು ಸ್ಪಷ್ಟತೆ ನೀಡಬೇಕು. ಈ ಕುರಿತು ಸಂಬಂಧಪಟ್ಟ ಪೊಲೀಸ್ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಅಧಿಕೃತವಾಗಿ ಮಾಹಿತಿ ನೀಡಬೇಕು ಎಂದು ಎಂದು ಕೃಷ್ಣ ಬೈರೇಗೌಡ ಸೂಚಿಸಿದರು
ಮುಖ್ಯ ಹಾಗೂ ಹೆಚ್ಚಿನ ಸಂಚಾರವಿರುವ ರಸ್ತೆಗಳಲ್ಲಿ ಪಾದಚಾರಿ ಮತ್ತು ವಾಹನ ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಸುಗಮ ಸಂಚಾರಕ್ಕೆ ಆದ್ಯತೆ ನೀಡಬೇಕು ಎಂದು ಕೃಷ್ಣ ಬೈರೇಗೌಡ ನಿರ್ದೇಶನ ನೀಡಿದರು.
ಸ್ಟ್ರೀಟ್ ವೆಂಡರ್‍ಗಳಿಗೆ ಸಂಬಂಧಿಸಿದಂತೆ ಹೊಸ ಸಮಗ್ರ ಸಮೀಕ್ಷೆಯನ್ನು ತ್ವರಿತವಾಗಿ ನಡೆಸಬೇಕು. ಸಮೀಕ್ಷೆಯ ಬಳಿಕ ಅರ್ಹತೆ ಹಾಗೂ ಕಾನೂನುಬದ್ಧ ಮಾನದಂಡಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್., ಪೆÇಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್., ಜಿ.ಜಗದೀಶ್, ಡಾ.ರಾಜೇಂದ್ರ ಕೆ.ವಿ., ಪೆÇಲೀಸ್ ಅಧಿಕಾರಿಗಳು, ಕಾರ್ಯಪಾಲಕ ಇಂಜಿನಿಯರ್‍ಗಳು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.
ಪಾಲಿಕೆ-ಪೊಲೀಸ್ ಜಂಟಿ ಆದೇಶ ಹೊರಡಿಸಲು ಸೂಚನೆ..!
ಪಾಲಿಕೆ-ಪೊಲೀಸ್ ಜಂಟಿ ಕಾರ್ಯಾಚರಣೆ, ಟಾಸ್ಕ್ ಫೋರ್ಸ್ ರಚನೆ, ರಸ್ತೆವಾರು ವ್ಯಾಪ್ತಿ ಗುರುತಿಸುವಿಕೆ, ಮರು ಒತ್ತುವರಿ ಪತ್ತೆ ಹಾಗೂ ಕಾನೂನು ಕ್ರಮಗಳ ಕುರಿತು ಮುಖ್ಯ ಆಯುಕ್ತರ ಮಟ್ಟದಲ್ಲಿ ಜಂಟಿ ಆದೇಶ/ಸಕ್ರ್ಯುಲರ್ ಹೊರಡಿಸಬೇಕು. ಪ್ರತಿ ಅಧಿಕಾರಿಯ ಜವಾಬ್ದಾರಿ ಮತ್ತು ಕಾರ್ಯವ್ಯಾಪ್ತಿಯನ್ನು ಸ್ಪಷ್ಟವಾಗಿ ನಿಗದಿಪಡಿಸಿ, ಮರು ಒತ್ತುವರಿ ಪ್ರಕರಣಗಳ ಕುರಿತು ತ್ವರಿತವಾಗಿ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ವಿವರಗಳನ್ನು ನಿಯಮಿತವಾಗಿ ಪರಿಶೀಲಿಸುವ ವ್ಯವಸ್ಥೆ ರೂಪಿಸಬೇಕು ಎಂದು ಕೃಷ್ಣ ಬೈರೇಗೌಡ ನಿರ್ದೇಶನ ನೀಡಿದರು.