ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗವು(ಕೆಪಿಎಸ್‍ಸಿ) ನಡೆಸಿದ್ದ ಪಶುವೈದ್ಯಾಧಿಕಾರಿಗಳ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಕೂಡಲೇ ನೇಮಕಾತಿ ಆದೇಶ ಪತ್ರ ನೀಡಬೇಕು ಎಂದು ಪಶುವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

ಶುಕ್ರವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭ್ಯರ್ಥಿ ಡಾ.ಹನುಮಂತಪ್ಪ ಕಳಸಾಪುರ, ಕೆಪಿಎಸ್‍ಸಿ 342 ಸಾಮಾನ್ಯ ಹಾಗೂ 58 ಬ್ಯಾಕ್‍ಲಾಗ್ ಸೇರಿದಂತೆ ಒಟ್ಟು 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೈಗೊಂಡಿತ್ತು. ಸದರಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಅಕ್ರಮವಾಗಿ ಭಾಗಿಯಾಗಿದ್ದಾರೆಂದು 29 ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿ, ತನಿಖೆಯನ್ನು ಸಿಐಡಿಗೆ ವಹಿಸಲಾಗಿರುತ್ತದೆ ಎಂದರು.

ಸಿಐಡಿ ತನಿಖೆಯು ಯಾವುದೇ ರೀತಿಯ ಹಸ್ತಕ್ಷೇಪವಿಲ್ಲದೆ ಕಾನೂನುಬದ್ಧವಾಗಿ ನಡೆಯಬೇಕು. ಇಂತಹ ಹಗರಣಗಳು ವಿವಿಧ ನೇಮಕಾತಿ ಪ್ರಕ್ರಿಯೆಗಳಲ್ಲಿ ಕೇಳಿ ಬಂದಾಗ ಸುಪ್ರೀಂಕೋರ್ಟ್ ಕಳಂಕಿತ ಹಾಗೂ ಪ್ರಾಮಾಣಿಕ ಅಭ್ಯರ್ಥಿಗಳನ್ನು ವಿಂಗಡಿಸಿ, ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಬೇಕೆಂದು ತೀರ್ಪು ನೀಡಿರುತ್ತದೆ. ಆದುದರಿಂದ ರಾಜ್ಯ ಸರಕಾರ ಶೀಘ್ರವಾಗಿ ಒಂದು ತಿಂಗಳೊಳಗಾಗಿ ಸಿಐಡಿ ಯಿಂದ ಮಧ್ಯಂತರ ವರದಿ ತರಿಸಿಕೊಂಡು, ಪರೀಕ್ಷೆಯಲ್ಲಿ ನೇಮಕವಾದ  ಪ್ರಾಮಾಣಿಕ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರವನ್ನು ನೀಡಬೇಕು ಎಂದು ಹನುಮಂತಪ್ಪ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿಗಳಾದ ಡಾ.ಪೂಜಾ ಎಚ್.ವಿ, ಭರತ್, ಗೀತಾಂಜಲಿ, ಆಕಾಶ್ ಉಪಸ್ಥಿತರಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor