×
Ad

ಬೆಂಗಳೂರು| ಯುವತಿ ಹೆಸರಿನಲ್ಲಿ ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿ ವಂಚನೆ: ಆರೋಪಿ ಸೆರೆ

Update: 2024-01-12 18:23 IST

ಸಾಂದರ್ಭಿಕ ಚಿತ್ರ

ಬೆಂಗಳೂರು: ಯುವತಿಯ ಹೆಸರಿನಲ್ಲಿ ವಾಟ್ಸ್ ಆ್ಯಪ್ ಮೂಲಕ ವಂಚನೆ ಕೃತ್ಯವೆಸಗುತ್ತಿದ್ದ ಆರೋಪಿಯನ್ನು ಇಲ್ಲಿನ ಉತ್ತರ ವಿಭಾಗದ ಸಿಇಎನ್ ಕ್ರೈಂ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಹರಿ ಯಾನೆ ನರಹರಿ ಎಂಬಾತ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಬೊಮ್ಮನಹಳ್ಳಿಯ ಎನ್.ಆರ್.ಲಾಡ್ಜ್ ನಲ್ಲಿ ಕೆಲಸ ಮಾಡುತ್ತಿದ್ದ ಹರಿ, ಲಾಡ್ಜ್ ಗೆ ಬರುವ ಗ್ರಾಹಕರ ಪೋನ್ ನಂಬರ್ ಪಡೆಯುತ್ತಿದ್ದ. ಬಳಿಕ ಹುಡುಗಿಯರ ಹೆಸರಿನಲ್ಲಿ ಮೆಸೇಜ್ ಮಾಡಿ, ಅವರಿಂದ ಖಾಸಗಿ ಫೊಟೋ ಪಡೆದು, ಅದೇ ಫೊಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಎನ್ನಲಾಗಿದೆ.

ಇದೇ ರೀತಿ ವ್ಯಕ್ತಿಯೊಬ್ಬರನ್ನು ಅನಿತಾ ಎಂಬ ಹೆಸರಿನಲ್ಲಿ ಸಂಪರ್ಕಿಸಿದ್ದ ಆರೋಪಿ, ಅನೈತಿಕ ಸಂಬಂಧದ ಸಂದೇಶ ಕಳುಹಿಸಿದ್ದ. ನಂತರ ಆ ಸಂದೇಶಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ, ಹಂತ ಹಂತವಾಗಿ ಒಟ್ಟು ಲಕ್ಷಾಂತರ ರೂಪಾಯಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಈ ಬಗ್ಗೆ ಉತ್ತರ ವಿಭಾಗದ ಸಿಇಎನ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯು ಅನಿತಾ ಎಂಬ ಹೆಸರಿನಲ್ಲಿ ನಕಲಿ ವಾಟ್ಸ್ಆ್ಯಪ್ ಖಾತೆಯನ್ನು ಸೃಷ್ಟಿಸಿದ್ದ. ಆ ಖಾತೆಗೆ ಹುಡುಗಿಯ ಭಾವಚಿತ್ರವನ್ನು ಬಳಕೆ ಮಾಡಿಕೊಂಡು ದೂರುದಾರರೊಂದಿಗೆ ಚಾಟ್ ಮಾಡಿದ್ದಲ್ಲದೇ, ಆತನ ಫೊಟೋಗಳನ್ನು ಸಂಗ್ರಹಿಸಿಕೊಂಡಿದ್ದ. ನಂತರ ಆತನ ಫೊಟೋವನ್ನು ಮಾರ್ಫ್ ಮಾಡಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದನು. ಹಣ ಕೊಡದಿದ್ದರೆ ಫೊಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಹೆದರಿಸಿ, 1.10 ಲಕ್ಷ ರೂ. ಹಣ ವಸೂಲಿ ಮಾಡಿದ್ದ ಎಂದು ತಿಳಿದು ಬಂದಿದೆ.

ನಂತರ ಅದೇ ಹಣವನ್ನು ಸ್ನೇಹಿತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು, ಎಟಿಎಂ ಮೂಲಕ ಡ್ರಾ ಮಾಡಿ ವಿಲಾಸಿ ಜೀವನ ನಡೆಸುತ್ತಿದ್ದ. ಈ ರೀತಿ ವಿವಿಧ ಬ್ಯಾಂಕ್ ಖಾತೆಗಳಲ್ಲಿ ನಡೆದ ಹಣಕಾಸಿನ ವಹಿವಾಟಿನಿಂದ ಹಾಗೂ ತಾಂತ್ರಿಕ ಮಾಹಿತಿಯನ್ನಾಧರಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್ ಪೋನ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News