ಆಯುಷ್ಮಾನ್ ಕಾರ್ಡ್ ಹೊಂದಿದ ಪ್ರತಿಯೊಬ್ಬರಿಗೂ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ : ಸಂಸದ ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್
ಬೆಂಗಳೂರು : ಆಯುಷ್ಮಾನ್ ಕಾರ್ಡ್ ಹೊಂದಿದ ಪ್ರತಿಯೊಬ್ಬರಿಗೂ 5 ಲಕ್ಷ ರೂ.ವರೆಗಿನ ಉಚಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ದೊರಕಲಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಿ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶುಕ್ರವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ಎರಡನೆ ತ್ರೈಮಾಸಿಕ ದಿಶಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರವು ದೇಶದ ಅಭಿವೃದ್ಧಿಗೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರ, ಹಿಂದುಳಿದವರ, ಬಡವರಪರ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯ ಪ್ರತಿಯೊಬ್ಬರು ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳುವಂತೆ ಅರಿವು ಮೂಡಿಸಿ ಎಂದರು.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ 4,885 ರೈತರು ನೋಂದಣಿ ಯಾಗಿದ್ದಾರೆ. ಜಿಲ್ಲೆಯ ರೈತರು ತೋಟಗಾರಿಕೆ ಹಾಗೂ ಕೃಷಿ ವಾಣಿಜ್ಯ ಬೆಳೆಗಳನ್ನು ಹೆಚ್ಚು ಬೆಳೆಯುತ್ತಾರೆ. ಒಮ್ಮೆ ನಷ್ಟವಾದರೆ ರೈತರಿಗೆ ಬಹಳ ತೊಂದರೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ಬೆಳೆ ವಿಮೆ ಮಾಡಿಸುವುದರಿಂದ ಆಗುವಂತಹ ಅನುಕೂಲಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡು ರೈತರಿಗೆ ಅರಿವು ಮೂಡಿಸಿ, ಈ ವರ್ಷ ನೋಂದಣಿ ಹೆಚ್ಚಿಸಬೇಕು ಎಂದರು.
ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಒಳ್ಳೆಯ ಗುಣಮಟ್ಟದ ಅಕ್ಕಿಯನ್ನು ಕೇಂದ್ರ ಸರಕಾರ ಪೂರೈಸುತ್ತಿದ್ದು ಒಂದು ಕೆ.ಜಿ ಅಕ್ಕಿಗೆ 29 ರೂಪಾಯಿಗಳು ಮಾತ್ರ. ಸಾರ್ವಜನಿಕರಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು. ಗ್ಯಾಸ್ ಸಂಪರ್ಕ ಹೊಂದಿಲ್ಲದ 3,098 ಕುಟುಂಬಗಳ ಜಿಲ್ಲೆಯಲ್ಲಿದ್ದು ಅಂತವರಿಗೆ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಕಲ್ಪಿಸಲು ಕ್ರಮ ವಹಿಸಬೇಕು ಎಂದು ಅವರು ತಿಳಿಸಿದರು.
ಒಂದು ದೇಶ ಒಂದು ಪಡಿತರ ಯೋಜನೆ ಜಾರಿಯಾಗಿ ದೇಶದ ಜನರು ದೇಶದ ಯಾವುದೇ ಪಡಿತರ ಅಂಗಡಿಯಲ್ಲಿ ಬೇಕಾದರೂ ಪಡಿತರ ಪಡೆಯಬಹುದಾದ ಸೌಲಭ್ಯವಿದೆ. ಆದರೆ ಹೊರ ರಾಜ್ಯದಿಂದ ಬಂದು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ನಮ್ಮ ರಾಜ್ಯದಲ್ಲಿ ಪಡಿತರ ಪಡೆಯಲು ಆಗುತ್ತಿಲ್ಲ ಎಂಬ ಮಾಹಿತಿ ಬಂದಿದ್ದು, ರಾಜ್ಯ ಸರಕಾರಕ್ಕೆ ಇದರ ಬಗ್ಗೆ ವರದಿ ಸಲ್ಲಿಸಬೇಕು ಎಂದು ಅವರು ಹೇಳಿದರು.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಪ್ರಗತಿ ಸಾಧಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು. ಜಿಲ್ಲೆ ವ್ಯಾಪ್ತಿಯ ಸರಕಾರಿ ಶಾಲೆಗಳಿಗೆ ತಿಂಗಳಿಗೊಮ್ಮೆ ಎಲ್ಲ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮಕ್ಕಳ ಜತೆಗೆ ಮಧ್ಯಾಹ್ನದ ಬಿಸಿಯೂಟ ಮಾಡಬೇಕು. ಇದರಿಂದ ಆಹಾರದ ಗುಣಮಟ್ಟ ಹಾಗೂ ಅಧಿಕಾರಿಗಳ ಕಾರ್ಯಕ್ಷಮತೆ ಕಾಣಬಹುದು ಎಂದು ಅವರು ತಿಳಿಸಿದರು.
ಬಾಣಂತಿಯರ, ಶಿಶುಗಳ ಸಾವು ತಡೆಗಟ್ಟಿ :
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಹಾಗೂ ಖಾಸಗಿ ವೈದ್ಯರು, ನರ್ಸ್ ಗಳಿಗೆ ಕಾರ್ಯಾಗಾರ ಏರ್ಪಡಿಸಿ ಗರ್ಭಿಣಿ, ಬಾಣಂತಿಯರ ಹಾಗೂ ಶಿಶುಗಳ ಲಾಲನೆ, ಪಾಲನೆ, ಚಿಕಿತ್ಸಾ ವಿಧಾನ ಬಗ್ಗೆ ತರಬೇತಿ ನೀಡಬೇಕು. ಇದರಿಂದ ಗರ್ಭಿಣಿಯರ, ಶಿಶುಗಳ ಸಾವು ಸಂಭವಿಸುವುದನ್ನು ತಪ್ಪಿಸಬಹುದು ಎಂದರು.
ಸಭೆಯಲ್ಲಿ ದೊಡ್ಡಬಳ್ಳಾಪುರ ಶಾಸಕರಾದ ಧೀರಜ್ ಮುನಿರಾಜು, ಜಿಲ್ಲಾಧಿಕಾರಿ ಡಾ. ಎನ್.ಶಿವಶಂಕರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕೆ.ಎನ್ ಅನುರಾಧ, ಜಿ.ಪಂ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಅಪರ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್, ದಿಶಾ ಸಮಿತಿಯ ನಾಮ ನಿರ್ದೇಶಿತ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.