ಜಂಟಿ ಅಧಿವೇಶನಕ್ಕೆ ಹಾಜರಾಗಲಿರುವ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್
ಥಾವರ್‌ಚಂದ್ ಗೆಹ್ಲೋಟ್ (Photo: PTI)
ಬೆಂಗಳೂರು: ಇಂದಿನಿಂದ ಆರಂಭವಾಗುವ ರಾಜ್ಯ ವಿಧಾನಸಭೆ–ವಿಧಾನಪರಿಷತ್ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹಾಜರಾಗಲಿದ್ದಾರೆ. ಈ ಕುರಿತು ಸದನಕ್ಕೆ ಹಾಜರಾಗುವುದಾಗಿ ಸ್ಪೀಕರ್ ಹಾಗೂ ಮುಖ್ಯಮಂತ್ರಿ ಕಚೇರಿಗೆ ರಾಜ್ಯಪಾಲರು ಅಧಿಕೃತ ಸಂದೇಶ ರವಾನೆ ಮಾಡಿದ್ದಾರೆ ಎಂದು ಲೋಕಭವನದ ಉನ್ನತ ಮೂಲಗಳು ಮಾಹಿತಿ ನೀಡಿವೆ.
ಜಂಟಿ ಅಧಿವೇಶನದಲ್ಲಿ ಭಾಗವಹಿಸುವುದಾಗಿ ರಾಜ್ಯಪಾಲರು ತಿಳಿಸಿದ್ದರೂ, ಅವರು ಸದನದಲ್ಲಿ ಸಂಪೂರ್ಣ ಭಾಷಣ ಮಾಡುವರೇ ಅಥವಾ ಭಾಷಣವನ್ನು ಟೇಬಲ್ ಮಾಡಿ ಹೊರನಡೆಯುವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರು ನಿರಾಕರಿಸಿದ್ದಾರೆ ಎಂಬ ವರದಿ ಬುಧವಾರ ಪ್ರಕಟವಾಗಿತ್ತು.
ರಾಜ್ಯಪಾಲರ ಇಂದಿನ ನಿರ್ಧಾರ ಅತ್ಯಂತ ಗಮನಾರ್ಹವಾಗಿದ್ದು, ಭಾಷಣದ 11 ಪ್ಯಾರಾಗಳ ಕುರಿತು ಅವರು ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಅವುಗಳನ್ನು ಓದುತ್ತಾರೆಯೇ ಅಥವಾ ಓದದೆ ಬಿಡುತ್ತಾರೆಯೇ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯ ವಿಧಾನಸಭೆಯ ಜಂಟಿ ಅಧಿವೇಶನವು ಜನವರಿ 31ರವರೆಗೆ ನಡೆಯಲಿದೆ. ಜಂಟಿ ಅಧಿವೇಶನದ ಜೊತೆಗೆ, ನರೇಗಾ ಯೋಜನೆಯ ಹೆಸರನ್ನು ಬದಲಾಯಿಸಿರುವ ಕೇಂದ್ರ ಸರ್ಕಾರದ ತೀರ್ಮಾನದ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ವಿಶೇಷ ಅಧಿವೇಶನವನ್ನೂ ಕರೆದಿದೆ.
ರಾಜ್ಯಪಾಲರ ಭಾಷಣದ ಸ್ವರೂಪ ಕುರಿತು ಅಧಿಕೃತ ಸ್ಪಷ್ಟನೆ ಇನ್ನೂ ಲಭ್ಯವಾಗಿಲ್ಲ.