×
Ad

Bengaluru | ಅಂಬಾರಿ ‘ಡಬಲ್ ಡೆಕ್ಕರ್ ಬಸ್’ಗೆ ಚಾಲನೆ ನೀಡಿದ ಸಚಿವ ಎಚ್.ಕೆ.ಪಾಟೀಲ್

Update: 2026-01-21 21:37 IST

ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಬೆಂಗಳೂರು ನಗರದಲ್ಲಿ ‘ಅಂಬಾರಿ ಡಬಲ್ ಡೆಕ್ಕರ್ ಬಸ್’ಗೆ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ್ ಅವರು ಬುಧವಾರ ನಗರದ ರವೀಂದ್ರ ಕಲಾಕ್ಷೇತ್ರ ಎದುರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದಾರೆ.

ಈ ವೇಳೆ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ‘ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಸರಕಾರದ ಸ್ವಾಮ್ಯಕ್ಕೆ ಒಳಪಟ್ಟು ಪ್ರವಾಸೋದ್ಯಮ ಇಲಾಖೆಯ ಅಂಗಸಂಸ್ಥೆಯಾಗಿದ್ದು, 55 ವರ್ಷಗಳಿಂದ ಆತಿಥ್ಯ ಕ್ಷೇತ್ರ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯಕ್ಕೆ ಭೇಟಿ ನೀಡುವ ದೇಶ ಹಾಗೂ ವಿದೇಶದ ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ಆತಿಥ್ಯ ಸೇವೆಯನ್ನು ಒದಗಿಸುತ್ತಾ ಬಂದಿದೆ ಎಂದು ತಿಳಿಸಿದರು.

ಬೆಂಗಳೂರಿಗೆ ಬರುವ ಪ್ರವಾಸಿಗರಿಗೆ ಹಾಗೂ ಬೆಂಗಳೂರಿನ ಪ್ರವಾಸೋದ್ಯಮವನ್ನು ಜನಪ್ರಿಯಗೊಳಿಸಲು ಬೆಂಗಳೂರು ನಗರದಲ್ಲಿ ಲಂಡನ್ ಮಾದರಿಯ ‘ಅಂಬಾರಿ ಡಬಲ್ ಡೆಕ್ಕರ್’ ಬಸ್ ಅನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಒಟ್ಟು 3 ಡಬಲ್ ಡೆಕ್ಕರ್ ಬಸ್ ಅನ್ನು ಕಾರ್ಯಾಚರಣೆ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಡಬಲ್ ಡೆಕ್ಕರ್ ಜ.21ರಿಂದ ರವೀಂದ್ರ ಕಲಾಕ್ಷೇತ್ರ-ಕಾರ್ಪೋರೇಷನ್ ಸರ್ಕಲ್-ಹಡ್ಸನ್ ವೃತ್ತ -ಕಸ್ತೂರ ಬಾ ರಸ್ತೆ-ವಿಶ್ವೇಶ್ವರಯ್ಯ ಮೂಸಿಯಂ-ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ-ಅಂಚೆ ಕಚೇರಿ- ಹೈಕೋರ್ಟ್/ ವಿಧಾನಸೌಧ-ಕೆ.ಆರ್ ವೃತ್ತ -ಹಡ್ಸನ್ ವೃತ್ತ-ಕಾರ್ಪೋರೇಷನ್ ಸರ್ಕಲ್- ರವೀಂದ್ರ ಕಲಾಕ್ಷೇತ್ರ ಕಾರ್ಯಾಚರಣೆ ಮಾಡಲಿದೆ ಎಂದು ಮಾಹಿತಿ ನೀಡಿದರು.

ಒಂದು ದಿನಕ್ಕೆ ಪ್ರತಿ ವ್ಯಕ್ತಿಗೆ 180 ರೂ.ಗಳನ್ನು ದರ ನಿಗದಿ ಪಡಿಸಲಾಗಿದೆ. ಅಂಬಾರಿ ಬಸ್ ಲೋಯೆರ್ ಡೆಕ್ ಹವನಿಂತ್ರಣ ಬಸ್ ಆಗಿದ್ದು ಐಷಾರಾಮಿ ಆಸನಗಳನ್ನು ಒಳಗೊಂಡಿದೆ. ಪ್ರವಾಸಿಗರಿಗೆ ಸುತ್ತಮುತ್ತಲಿನ ಪ್ರವಾಸಿ ತಾಣಗಳ ಕುರಿತು ಪರಿಚಯಿಸಲು ಮೈಕ್ ಸಿಸ್ಟಮ್ ಅಳವಡಿಸಲಾಗಿದೆ. ಪ್ರತಿ ಬಸ್ ನಲ್ಲಿ ಅಪ್ಪರ್ ಡೆಕ್‍ನಲ್ಲಿ 20 ಆಸನಗಳಿದ್ದು ಪ್ರವಾಸಿಗರಿಗೆ ಎತ್ತರದಿಂದ ಪ್ರವಾಸಿ ತಾಣ ಮತ್ತು ನಗರ ವೀಕ್ಷಣಗೆ ಅನುಭವ ಪಡೆಯಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಮುಂಬರುವ ದಿನಗಳಲ್ಲಿ ಪ್ರತ್ಯೇಕ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಬಸ್ ಸಂಚಾರ ಮಾಡಲು ಕಾರ್ಯಕ್ರಮ ರೂಪಿಸಲಾಗುವುದು. ಡಬಲ್ ಡೆಕ್ಕರ್ ಬಸ್ ಬುಕ್ ಮಾಡಲು ಪ್ರವಾಸೋದ್ಯಮ ಇಲಾಖೆಯ ಜಾಲತಾಣ kstdc.co ಹಾಗೂ ದೂ: 080-4334 4334/35 ಮೊ: 89706 50070/ 89706 50075 ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀನಿವಾಸ್.ಎಂ, ಶಾಸಕ ಉದಯ್ ಬಿ ಗರುಡಾಚಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಮಂಜುನಾಥ್, ಇಲಾಖೆಯ ನಿರ್ದೇಶಕಿ ಗಾಯತ್ರಿ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರ ಸಹಿತ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News