ದ್ವೇಷ ಭಾಷಣ: ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕ್ರಮಕ್ಕೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಒತ್ತಾಯ
ಕಲ್ಲಡ್ಕ ಪ್ರಭಾಕರ ಭಟ್
ಬೆಂಗಳೂರು: ಮಹಿಳೆಯರನ್ನು ಎರಡನೇ ದರ್ಜೆ ಪ್ರಜೆಗಳಾಗಿ ಕಾಣುವುದು ಆರೆಸ್ಸೆಸ್‍ನ ಮನಃಸ್ಥಿತಿಯಾಗಿದ್ದು, ಈ ಮನಃಸ್ಥಿತಿಯ ಭಾಗವಾಗಿಯೇ ಕಲ್ಲಡ್ಕ ಪ್ರಭಾಕರ ಭಟ್ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಜನವಾದಿ ಮಹಿಳಾ ಸಂಘಟನೆ ಖಂಡಿಸಿದೆ.
ಸೋಮವಾರ ಸಂಘಟನೆಯ ಅಧ್ಯಕ್ಷೆ ಮೀನಾಕ್ಷಿ ಬಾಳಿ ಪ್ರಕಟನೆ ಹೊರಡಿಸಿದ್ದು, ಸ್ತ್ರೀಯರು ಪೂಜ್ಯನೀಯರು ಎಂದು ಬೊಗಳೆ ಕೊಚ್ಚುತ್ತಲೆ ಮುಸ್ಲಿಂರು ಎಂದಾಕ್ಷಣ ಅಪಮಾನಿಸುಬಹುದೇ? ಇದೇನಾ ಇವರ ಪವಿತ್ರ ಸಂಸ್ಕøತಿ? ಪ್ರಭಾಕರ್ ಭಟ್ ಈ ಹೇಳಿಕೆ ಅವರ ಕೀಳು ಸಂಸ್ಕೃತಿಯ ಪ್ರತೀಕವೆ ಆಗಿದೆ ಎಂದಿದ್ದಾರೆ.
ಮಂಡ್ಯದಲ್ಲಿ ಹನುಮ ಸಂಕೀರ್ತನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅನಗತ್ಯವಾಗಿ ಮುಸ್ಕಾನ್ ಎಂಬ ಯುವತಿಯನ್ನು ಅವಹೇಳನ ಮಾಡಿರುವುದು ಹಾಗೂ ಕಾಲೇಜಿಗೆ ಹೋಗದ ಹಾಗೇ ತಡೆಯುತ್ತೇವೆ ಎಂದು ಬೆದರಿಕೆ ಹಾಕಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಮಂಡ್ಯದಂತಹ ಸೌಹಾರ್ದ ನೆಲದಲ್ಲಿ ಸೌಹಾರ್ದತೆಗೆ ಬೆಂಕಿ ಹಚ್ಚುವುದನ್ನು ನಾವು ವಿರೋಧಿಸುತ್ತೇವೆ. ಕೋಮು ವಿಷ ಬೀಜ ಬಿತ್ತವುದು ಸಂವಿಧಾನ ವಿರೋಧಿ ನಡೆಯಾಗಿದೆ. ಇಂತಹ ಮಾನವ ವಿರೋಧಿ, ಸೌಹಾರ್ತತೆಗೆ ಧಕ್ಕೆ ತಂದು ಅಶಾಂತಿ ಉಂಟುಮಾಡುವ ಕಲ್ಲಡ್ಕ ಪ್ರಭಾಕರ್ ಭಟ್ಟನ ಮೇಲೆ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಬೇಕು ಎಂದು ಮೀನಾಕ್ಷಿ ಬಾಳಿ ಒತ್ತಾಯಿಸಿದ್ದಾರೆ.