ಪ್ರಿಯಾಂಕ್ ಖರ್ಗೆ ಜೆಡಿಎಸ್ ಪಕ್ಷದ ವಿಚಾರವನ್ನು ಬಿಟ್ಟು, ತಮ್ಮ ಪಕ್ಷದ ಹಣೆಬರಹ ನೋಡಿಕೊಳ್ಳಲಿ : ಎಚ್‍ಡಿಕೆ ತಿರುಗೇಟು
ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ಸಚಿವ ಪ್ರಿಯಾಂಕ್ ಖರ್ಗೆ ಅವರು ಜೆಡಿಎಸ್ ಪಕ್ಷದ ವಿಚಾರವನ್ನು ಬಿಟ್ಟು, ತಮ್ಮ ಪಕ್ಷದ ಹಣೆಬರಹ ನೋಡಿಕೊಳ್ಳಲಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಶುಕ್ರವಾರ ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಕಾಲ್ಡ್ ನ್ಯಾಷನಲ್ ಪಾರ್ಟಿ ಕಾಂಗ್ರೆಸ್ ಪಕ್ಷವು ಬಿಹಾರ, ಮಹಾರಾಷ್ಟ್ರದಲ್ಲಿ ಯಾವ ಹಂತಕ್ಕೆ ತಲುಪಿದೆ ಎಂಬುದನ್ನು ಮೊದಲು ನೋಡಿಕೊಳ್ಳಬೇಕು. ಜೆಡಿಎಸ್ ಬಗ್ಗೆ ಚರ್ಚೆ ಮಾಡಲು ಸಚಿವ ಪ್ರಿಯಾಂಕ್ ಖರ್ಗೆ ಯಾರು? ಅವರ ಪ್ರಮಾಣ ಪತ್ರ ನಮಗೆ ಬೇಕಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇರುವ ಮಂತ್ರಿಗಳು ಎಷ್ಟು ಜನ ಜೆಡಿಎಸ್‍ನಿಂದ ಪರವಾನಗಿ ಮೇಲೆ ಹೋಗಿದ್ದಾರೆ ಎನ್ನುವುದನ್ನು ಮೊದಲು ಅವರಪ್ಪನನ್ನು ಕೇಳಿ ತಿಳಿದುಕೊಳ್ಳಲಿ. ಮುಖ್ಯಮಂತ್ರಿಗಳಿಂದ ಹಿಡಿದು ಎಷ್ಟು ಜನ ಮಂತ್ರಿಗಳು ಜೆಡಿಎಸ್ ಮೂಲದವರು? ಗೊತ್ತಿದೆಯಾ? ಎಂದು ವಾಗ್ದಾಳಿ ನಡೆಸಿದರು.
ಮಿಸ್ಟರ್ ಖರ್ಗೆ ಅವರೇ, ಮೊದಲು ನಿಮ್ಮ ಪಕ್ಷವನ್ನು ಭದ್ರ ಮಾಡಿಕೊಳ್ಳಿ. ನಿಮ್ಮ ಪಕ್ಷದಲ್ಲಿ ಸದ್ಯಕ್ಕೆ ಒಬ್ಬರ ಪರವಾನಗಿ ಅವಧಿ ಮುಗಿದಿದೆ. ನನ್ನನ್ನು ಪರವಾನಗಿ ಮೇಲೆ ಮುಖ್ಯಮಂತ್ರಿ ಮಾಡಿ ಎಂದು ಇನ್ನೊಬ್ಬರು ಟವೆಲ್ ಹಾಕಿದ್ದಾರೆ. ಅವರು ನೋಡಿದರೆ ನನ್ನ ಪರವಾನಗಿ ಅವಧಿ ಇನ್ನೂ ಮುಗಿದಿಲ್ಲ. ಬಿಟ್ಟು ಕದಲುವ ಪ್ರಶ್ನೆಯೇ ಇಲ್ಲ, ನಾನೇ ಮುಂದುವರಿಯುತ್ತೇನೆ ಎಂದು ಹೇಳುತ್ತಿದ್ದಾರೆ. ಇದೆಲ್ಲಾ ಏನು ಮರಿ ಖರ್ಗೆ ಅವರೇ? ಮೊದಲು ನಿಮ್ಮ ಪಕ್ಷದ ಹಣೆಬರಹ ನೋಡಿಕೊಳ್ಳಿ. ನಂತರ ಬೇರೆಯವರ ಬಗ್ಗೆ ಮಾತನಾಡಿ ಎಂದು ತರಾಟೆಗೆ ತೆಗೆದುಕೊಂಡರು.