ನಮ್ಮ ಕುಟುಂಬ ಹಾಳು ಮಾಡಲು ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಯತ್ನ : ಎಚ್.ಡಿ.ಕುಮಾರಸ್ವಾಮಿ ಆರೋಪ
"ಪ್ರಜ್ವಲ್ ರೇವಣ್ಣನ ಕಾರು ಚಾಲಕ ಕಾರ್ತಿಕ್ ಡಿ.ಕೆ.ಶಿವಕುಮಾರ್ ಮನೆಗೆ ಹೋಗಿರುವುದಕ್ಕೆ ಸಿಡಿಆರ್ ದಾಖಲೆ ಇದೆ"
ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ‘ಸ್ಟಿಂಗ್ ಆಪರೇಷನ್’ ಪ್ರಕರಣದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಮನೆ ಲಿಂಕ್ ಇದೆ ಎಂದು ಆರೋಪಿಸಲಾಗಿದೆ. ಆದರೆ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕಾರು ಚಾಲಕರಾಗಿದ್ದ ಕಾರ್ತಿಕ್ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನೆಗೆ ಹೋಗಿದ್ದು ಏಕೆ? ಎಂದು ಕೇಂದ್ರದ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಸೋಮವಾರ ನಗರದ ಜೆಪಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಂದು ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗಿದ್ದು, ಇನ್ನೊಂದು ಪ್ರಕರಣದ ವಿಚಾರಣೆ ನಡೆಯುತ್ತಿದೆ. ಕಾರ್ತಿಕ್ ಎಂಬುವವರು ಡಿ.ಕೆ.ಶಿವಕುಮಾರ್ ಮನೆಗೆ ಹೋಗಿರುವುದಕ್ಕೆ ಸಿಡಿಆರ್ ದಾಖಲೆ ಇದೆ. ಇದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ ಎಂದು ದಾಖಲೆ ಪ್ರದರ್ಶಿಸಿದರು.
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಪ್ರಧಾನಿಯಾಗಲಿಲ್ಲ. ಮಾಜಿ ಪ್ರಧಾನಿ ಮೊಮ್ಮಗ ಎಂಬುದನ್ನು ದೇಶಾದ್ಯಂತ ಅಪಪ್ರಚಾರ ಮಾಡಬೇಕೆಂದು ನಮ ಕುಟುಂಬವನ್ನು ಹಾಳು ಮಾಡಿದ್ದಾರೆ. ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ ಸುರ್ಜೇವಾಲ, ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲರೂ ಸೇರಿ ಮಾಡಿದ್ದಾರೆ ಎಂದು ಕುಮಾರಸ್ವಾಮಿ ದೂರಿದರು.
ಪ್ರಜ್ವಲ್ ಕಾರು ಚಾಲಕ ಕಾರ್ತಿಕ್ ಎಂಬಾತನನ್ನು ಮನೆಗೆ ಕರೆಸಿಕೊಂಡು ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ.ಸುರೇಶ್ ನಮ ಕುಟುಂಬವನ್ನು ಹಾಳು ಮಾಡುವಂತಹ ಕೆಲಸ ಮಾಡಿದ್ದಾರೆ. ಇದರ ಬಗ್ಗೆ ತನಿಖೆ ಮಾಡಿದ್ದಾರೆಯೇ?. ದಿಲ್ಲಿಯ ನಮ್ಮ ನಿವಾಸಕ್ಕೆ ಬರುವವರನ್ನು ನಾವು ಪರಿಶೀಲನೆ ಮಾಡುವುದಿಲ್ಲ. ನೂರಾರು ಜನ ಬಂದು ಹೋಗುತ್ತಾರೆ, ಬಾಗಿಲು ತೆರೆದಿದೆ. ಬಂದವರಿಗೆ ಊಟದ ವ್ಯವಸ್ಥೆ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಸ್ಟಿಂಗ್ ಪ್ರಕರಣದ ತನಿಖೆಯನ್ನು ಪ್ರಾಮಾಣಿಕವಾಗಿ ಮಾಡಬೇಕು. ‘ಸ್ಟಿಂಗ್’ ಪ್ರಕರಣದ ತನಿಖೆ ನಡೆಸುತ್ತಿದ್ದ ಸತೀಶ್ ಎಂಬ ಇನ್‍ಸ್ಪೆಕ್ಟರ್ ಅನ್ನು ಏಕೆ ತೆಗೆದಿದ್ದೀರಿ?. ವಶಪಡಿಸಿಕೊಂಡ ಮೊಬೈಲ್‍ಫೋನ್‍ಗಳನ್ನು ಏನು ಪೂಜೆ ಮಾಡುತ್ತಿದ್ದೀರ? ರಿತೇಶ್ ಪಾಂಡೆ ಎಂಬ ವ್ಯಕ್ತಿಯ ಮುಖವನ್ನೇ ನಾನು ನೋಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ರಾಜ್ಯ ಪೊಲೀಸ್ ಮಹಾ ನಿರ್ದೇಶನ ಡಾ.ಎಂ.ಎ.ಸಲೀಂ ಒತ್ತಡಕ್ಕೆ ಮಣಿಯದೇ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದ ಕುಮಾರಸ್ವಾಮಿ, ನಾನು ಹೋರಾಟ ಮಾಡುವುದಾದರೆ ನೇರವಾಗಿಯೇ ಮಾಡುತ್ತೇನೆ. ಹಿಂಬಾಗಿಲ ಮೂಲಕ ಅಥವಾ ಪರೋಕ್ಷವಾಗಿ ಹೋರಾಟ ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು.
ನನ್ನ ನಡವಳಿಕೆ ಬಗ್ಗೆ ಈಗಾಗಲೇ ರಾಜ್ಯದ ಜನರು ಮುದ್ರೆ ಒತ್ತಿದ್ದಾರೆ. ನಿಮ್ಮ ಮುದ್ರೆಯನ್ನು ಕೇಳುವುದಿಲ್ಲ. ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಸಂಚು ರೂಪಸಿದ್ದರು ಎಂದು ಕಾಂಗ್ರೆಸ್‍ನವರೇ ಹೇಳಿದ್ದಾರೆ. ಸತ್ಯಾಸತ್ಯತೆ ರಾಹುಲ್ ಗಾಂಧಿಗೆ ಅರ್ಥವಾಗಿ ಕಟ್ಟುಕಥೆ ಎಂಬುದು ಜ್ಞಾನೋದಯವಾದರೆ ಬದಲಾವಣೆಯಾಗಬಹುದು ಎಂದು ತಿಳಿಸಿದರು.
ನಾನು ಯಾವುದೆ ಕಾರಣಕ್ಕೂ ರಕ್ಷಣೆ ಪಡೆಯಲು ಹೋಗಿಲ್ಲ. ಪ್ರಧಾನಿ ಮೋದಿಯವರನ್ನೂ ನಾವು ರಕ್ಷಣೆ ನೀಡುವಂತೆ ನಾವು ಕೇಳಿಲ್ಲ. 14 ವರ್ಷದಿಂದಲೂ ನಮ್ಮ ವಿರುದ್ಧ ಪ್ರಕರಣ ಬಾಕಿ ಇದ್ದರೂ ನಾವು ರಕ್ಷಣೆ ಪಡೆಯುವಂತಹ ಯಾವುದೇ ಕಾರ್ಯವನ್ನು ಮಾಡಿಲ್ಲ ಎಂದ ಅವರು, ನನ್ನನ್ನು ಯಾವುದೇ ಕಾರಣಕ್ಕೂ ಟಚ್ ಮಾಡಲು ಆಗುವುದಿಲ್ಲ ಎಂದು ಗುಡುಗಿದರು.