×
Ad

ವಂಚನೆ ಆರೋಪ; ಐಶ್ವರ್ಯಾ ಗೌಡ ವಿರುದ್ಧದ 5 ಪ್ರಕರಣ ರದ್ದುಪಡಿಸಿದ ಹೈಕೋರ್ಟ್

Update: 2026-07-08 00:17 IST

ಬೆಂಗಳೂರು : ಮಾಜಿ ಸಂಸದ ಡಿ.ಕೆ. ಸುರೇಶ್‌ ಅವರ ಸಹೋದರಿ ಎಂದು ಹೇಳಿಕೊಂಡು ಹಲವರಿಂದ 20 ಕೋಟಿ ರೂ.ಗಳಿಗೂ ಅಧಿಕ ಹಣ ಸಂಗ್ರಹಿಸಿ ವಂಚನೆ ಎಸಗಿದ ಆರೋಪ ಎದುರಿಸುತ್ತಿದ್ದ ಐಶ್ವರ್ಯಾ ಗೌಡ ಅಲಿಯಾಸ್‌ ನವ್ಯಶ್ರೀ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆ ಸೇರಿ ನಗರದ ಹಲವೆಡೆ ದಾಖಲಾಗಿದ್ದ 5 ಪ್ರಮುಖ ಪ್ರಕರಣಗಳನ್ನು ಹೈಕೋರ್ಟ್ ರದ್ದುಪಡಿಸಿದೆ.

ಪ್ರಕರಣ ರದ್ದು ಕೋರಿ ಐಶ್ವರ್ಯಾ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ದೂರುಗಳೆಲ್ಲ ಹಣ ರಿಕವರಿ ಸ್ವರೂಪದ್ದಾಗಿದ್ದು, ಅವುಗಳೆಲ್ಲ ಸಿವಿಲ್‌ ಸ್ವರೂಪದ ಪ್ರಕರಣಗಳೆಂದು ಅಭಿಪ್ರಾಯಪಟ್ಟು ರದ್ದುಪಡಿಸಿದೆ.

ವಿಚಾರಣೆ ವೇಳೆ ವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲ ಎಸ್‌. ಸುನೀಲ್‌ ಕುಮಾರ್‌, ದೂರುದಾರರು ನೀಡಿರುವ ದೂರುಗಳೆಲ್ಲವೂ ಹಣದ ವ್ಯವಹಾರ ಮತ್ತು ಅದರ ರಿಕವರಿ ಸ್ವರೂಪದ್ದಾಗಿವೆ. ಇಲ್ಲಿ ಯಾವುದೇ ಉದ್ದೇಶಪೂರ್ವಕ ಅಪರಾಧದ ಅಂಶಗಳಿಲ್ಲ. ಇದು ಕೇವಲ ಸಿವಿಲ್‌ ಸ್ವರೂಪದ ವಿವಾದವಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ಪ್ರಕರಣವೇನು?

ಐಶ್ವರ್ಯಾ ಗೌಡ ತಾನು ಡಿ.ಕೆ. ಸುರೇಶ್‌ ಸಹೋದರಿ ಎಂದು ನಂಬಿಸಿ ವೈದ್ಯೆ ಡಾ. ಮಂಜುಳಾ ಎಂಬುವವರಿಂದ 2.52 ಕೋಟಿ ರೂ. ನಗದು ಹಾಗೂ 2 ಕೆ.ಜಿಗೂ ಅಧಿಕ ಚಿನ್ನಾಭರಣ ಪಡೆದು ವಂಚಿಸಿದ ಆರೋಪದಡಿ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದೇ ರೀತಿ ಚಿನ್ನದಂಗಡಿ ಮಾಲೀಕರಿಂದ ಅಂದಾಜು 8.41 ಕೋಟಿ ರೂ. ಮೌಲ್ಯದ 14.6 ಕೆ.ಜಿ ಚಿನ್ನ ಪಡೆದು ಹಣ ನೀಡದೆ ಸತಾಯಿಸಿದ ಆರೋಪವೂ ಅವರ ಮೇಲಿತ್ತು. ಇನ್ನೊಂದು ಪ್ರಕರಣದಲ್ಲಿ ಚಿನ್ನದ ವ್ಯಾಪಾರಿಗೆ ಬರೋಬ್ಬರಿ 14 ಕೋಟಿ ರೂ. ವಂಚಿಸಿದ ದೂರು ದಾಖಲಾಗಿತ್ತು. ವಂಚನೆ ದೂರುಗಳು ಹೆಚ್ಚಾದಾಗ ಪೊಲೀಸರು ಐಶ್ವರ್ಯ ಗೌಡ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಬಿಎಂಡಬ್ಲ್ಯು, ಆಡಿಯಂಥ ಐಷಾರಾಮಿ ಕಾರುಗಳು ಹಾಗೂ 29 ಕೆ.ಜಿ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News