×
Ad

Bengaluru | 11 ಮಂದಿ ಡ್ರಗ್ಸ್ ಪೆಡ್ಲರ್‌ಗಳ ಬಂಧನ, 2.85 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ

Update: 2026-07-07 20:54 IST

ಬೆಂಗಳೂರು : ನಿಷೇಧಿತ ಮಾದಕ ವಸ್ತುಗಳಾದ ಗಾಂಜಾ, ಹೈಡ್ರೋ ಗಾಂಜಾ ಹಾಗೂ ಎಂಡಿಎಂಎ ಮಾರಾಟ ಮಾಡುವ ಜಾಲವನ್ನು ಬೆಂಗಳೂರು ನಗರ ಪೊಲೀಸರು ಪತ್ತೆ ಹಚ್ಚಿದ್ದು, 9 ಹೊರ ರಾಜ್ಯದವರು ಹಾಗೂ ಇಬ್ಬರು ಸ್ಥಳೀಯರು ಸೇರಿ 11 ಮಂದಿ ಡ್ರಗ್ಸ್ ಪೆಡ್ಲರ್‌ ಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಒಟ್ಟು 2.85 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ತ್ರಿಪುರಾ ರಾಜ್ಯದ ಸಂದೀಪ್(22) ಹಾಗೂ ಶಾಂತನ(23), ಕೇರಳ ಮೂಲದ ಜಾಸಿರ್(32), ಅಭಿಷೇಕ್(21), ತುಫಾನ್ ಯಾದವ್(26), ಲಿಟನ್ ದೇವನಾಥ್(23), ಸುಮನ್ ದಾಸ್(23), ಬಿಟ್ಟು ಕುಮಾರ್(23), ಸುಶಾಂತ್ ಕುಮಾರ್(22), ಮೊಹಮ್ಮದ್ ಕುಂದರ್(32) ಹಾಗೂ ನಿತೀಶ್ ಪೂಜಾರಿ(32) ಬಂಧಿತ ಆರೋಪಿಗಳಾಗಿದ್ದಾರೆ.

ನಗರದ ಕಾಲೇಜುವೊಂದರಲ್ಲಿ ಬಿಕಾಂ ವಿದ್ಯಾಭ್ಯಾಸ ಮಾಡುತ್ತಿದ್ದ ತ್ರಿಪುರಾ ರಾಜ್ಯದ ವಿದ್ಯಾರ್ಥಿಗಳಾದ ಸಂದೀಪ್ ಹಾಗೂ ಶಾಂತನ ಕಳೆದ ಐದು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದರು. ಅವರು ಹೊರ ರಾಜ್ಯದಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿಸಿ, ಪರಿಚಿತರ ಮೂಲಕ ಕಾಲೇಜು ವಿದ್ಯಾರ್ಥಿಗಳು ಸೇರಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಸದ್ಯ ವಿದ್ಯಾರಣ್ಯಪುರ ಪೊಲೀಸರು ಅವರನ್ನು ಬಂಧಿಸಿ, 2 ಕೋಟಿ ರೂ. ಮೌಲ್ಯದ 2 ಕೆ.ಜಿ ಎಂಡಿಎಂಎ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.

ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಜಾಸಿರ್ ಹಾಗೂ ಅಭಿಷೇಕ್ ಎಂಬ ಆರೋಪಿಗಳನ್ನು ಜೀವನ್ ಭೀಮಾ ನಗರ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 1.767 ಕೆಜಿ ಹೈಡ್ರೋಗಾಂಜಾ ಹಾಗೂ 5.90 ಲಕ್ಷ ರೂ. ನಗದು, 1 ಬೈಕ್, 2 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.

ದೇವನಹಳ್ಳಿ ಪೊಲೀಸರು ತುಫಾನ್ ಯಾದವ್, ಲಿಟನ್ ದೇವನಾಥ್, ಸುಮನ್ ದಾಸ್, ಬಿಟ್ಟು ಕುಮಾರ್ ಮತ್ತು ಸುಶಾಂತ್ ಕುಮಾರ್ ಎಂಬುವವರನ್ನು ಬಂಧಿಸಿದ್ದು, ಆರೋಪಿಗಳಿಂದ 16.920 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಇನ್ನು ಹೆಬ್ಬಗೋಡಿಪೊಲೀಸರು ಮೊಹಮ್ಮದ್ ಕುಂದರ್ ಹಾಗೂ ನಿತೀಶ್ ಪೂಜಾರಿಯನ್ನು ಬಂಧಿಸಿದ್ದು, 16 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ.

 

‘ಡ್ರಗ್ಸ್ ಪೆಡ್ಲರ್‌ಗಳು ಹೆಚ್ಚಿನ ಹಣಗಳಿಸುವ ಆಸೆಗೆ ಹೊರ ರಾಜ್ಯದಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿಸಿ, ಪರಿಚಿತರ ಮುಖೇನ ಕಾಲೇಜಿನ ವಿದ್ಯಾರ್ಥಿಗಳು ಸೇರಿ ಸಾರ್ವಜನಿಕರಿಗೆ ಹೆಚ್ಚಿನ ದರಕ್ಕೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಈಗ ವಿದ್ಯಾರಣ್ಯಪುರ ಪೊಲೀಸರು 2 ಕೋಟಿ ರೂ., ಜೀವನ್ ಭೀಮಾನಗರ ಪೊಲೀಸರು 68.65 ಲಕ್ಷ ರೂ., ದೇವನಹಳ್ಳಿ ಪೊಲೀಸರು 8.35 ಲಕ್ಷ ರೂ. ಹಾಗೂ ಹೆಬ್ಬಗೋಡಿಪೊಲೀಸರು 8 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳನ್ನು ನಿಗಧಿತ ದಿನಾಂಕಗಳಂದು ನ್ಯಾಯಾಲಯಕ್ಕೆ ಒಪ್ಪಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ನಗರದಲ್ಲಿ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಅಪರಿಚಿತ ವ್ಯಕ್ತಿಗಳ ಪತ್ತೆ ಕಾರ್ಯ ಮುಂದುವರೆದಿದೆ’

-ಸೀಮಂತ್ ಕುಮಾರ್ ಸಿಂಗ್, ಬೆಂಗಳೂರು ನಗರ ಪೊಲೀಸ್ ಆಯುಕ್ತ

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News