×
Ad

Hoskote | ನಿಧಿ ಆಸೆಗಾಗಿ ಮಗುವಿನ ಬಲಿಗೆ ಯತ್ನ?

ತಳ ಮಹಡಿಯಲ್ಲಿ ಅಗೆದು ಗುಂಡಿ ತೋಡಿರುವುದು ಪತ್ತೆ!

Update: 2026-01-04 23:47 IST

 ನಿಧಿ ಆಸೆಗಾಗಿ ಮಗುವಿನ ಬಲಿಗೆ ಯತ್ನ?

ಹೊಸಕೋಟೆ/ದೇವನಹಳ್ಳಿ : ಹೊಸಕೋಟೆ ತಾಲೂಕಿನ ಸೂಲಿಬೆಲೆ ಪಟ್ಟಣದಲ್ಲಿ ಶನಿವಾರ ಒಂದು ವರ್ಷದ ಗಂಡು ಮಗುವೊಂದನ್ನು ವಾಮಾಚಾರಕ್ಕೆ ಬಲಿಕೊಡಲು ಸಿದ್ಧತೆ ನಡೆಯುತ್ತಿತ್ತು ಎಂಬ ಅನುಮಾನದಡಿ ಜಿಲ್ಲಾ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮನೆಯ ಮೇಲೆ ದಾಳಿ ಮಾಡಿ ರಕ್ಷಣೆ ಮಾಡಿದ್ದಾರೆ.

ರಕ್ಷಣೆ ಮಾಡಿದ ಮಗುವನ್ನು ಶಿಶು ಮಂದಿರದ ಆಸರೆಗೆ ಒಪ್ಪಿಸಲಾಗಿದ್ದು, ಸೋಮವಾರ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗುತ್ತದೆ. ಅಲ್ಲಿ ಬರುವ ಆದೇಶದ ಬಳಿಕ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯಲಿದೆ. ಶನಿವಾರ ಮುಂಜಾನೆ ಮಕ್ಕಳ ಸಹಾಯವಾಣಿಗೆ ಸಾರ್ವಜನಿಕರೊಬ್ಬರು ಕರೆ ಮಾಡಿ ವಾಮಾಚಾರ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು.

ಕರೆ ಆಧರಿಸಿ ತಕ್ಷಣ ಕಾರ್ಯಪ್ರವೃತ್ತರಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಶಿವಮ್ಮ, ಮಕ್ಕಳ ರಕ್ಷಣಾಧಿಕಾರಿ ಶ್ರೀಧರ್ ಹಾಗೂ ಸಿಬ್ಬಂದಿ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಶ್ರೀನಿವಾಸ್ ಅವರು ಪೊಲೀಸರ ಸಹಕಾರದೊಂದಿಗೆ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಮೂರಂತಸ್ತಿನ ಕಟ್ಟಡದಲ್ಲಿನ ತಳ ಮಹಡಿಯಲ್ಲಿ ಅಗೆದು ಗುಂಡಿ ತೋಡಿರುವ ದೃಶ್ಯ ಕಂಡು ಬಂದಿದೆ. ಜತೆಗೆ ಅಲ್ಲಿ 1 ವರ್ಷದ ಗಂಡು ಮಗು ಪತ್ತೆಯಾಗಿದೆ.

ನಿಧಿ ಆಸೆಗಾಗಿ ಮಗು ಬಲಿಯ ಯತ್ನ?: ನಿಧಿ ಆಸೆಗಾಗಿ ಮಗು ಬಲಿಕೊಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮನೆಯೊಂದರಲ್ಲಿ ಹುತ್ತವನ್ನು ಅಗೆದು ಪೂಜಾ ಸಾಮಗ್ರಿ ಗಳನ್ನು ಅಣಿಗೊಳಿಸಿರುವ ದೃಶ್ಯ ಕಂಡುಬಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ತನಿಖೆ ವೇಳೆ ಇಮ್ರಾನ್ ಹಾಗೂ ನಚ್ಚಾ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಈ ಮಗುವನ್ನು ಕೋಲಾರದ ದಂಪತಿಯಿಂದ ಖರೀದಿಸಿ ತಂದಿರುವುದಾಗಿ ತಿಳಿಸಿದ್ದಾರೆ.

ಸಾಕಷ್ಟು ಅನುಮಾನ: ಮನೆಯಲ್ಲಿ ಹುತ್ತ ಬೆಳೆದು ಕೊಂಡಿತ್ತು. ಅದನ್ನು ತೆರವುಗೊಳಿಸಲು ಅಗೆದಿರುವುದಾಗಿ ಮನೆಯವರು ಒಂದು ಕಡೆ ಹೇಳಿಕೆ ನೀಡಿದ್ದಾರೆ. ಮತ್ತೊಂದು ಕಡೆ ಗಂಡನಿಗೆ ಆರೋಗ್ಯ ಸರಿಯಿರಲಿಲ್ಲ. ಅವರಿಗೆ ಯಾರೋ ಮಾಟ ಮಾಡಿಸಿ ಇಲ್ಲಿ ಅಡಗಿಸಿಟ್ಟಿದ್ದಾರೆ ಎಂಬ ಕಾರಣಕ್ಕೆ ಆಗೆದಿದ್ದೇವೆ ಎಂಬ ಗೊಂದಲದ ಹೇಳಿಕೆ ನೀಡಿದ್ದಾರೆ. ಈ ಭಿನ್ನ ಹೇಳಿಕೆಗಳು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ.

ಸಹಾಯವಾಣಿ ಕರೆ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದ್ದು, ಮಗುವನ್ನು ರಕ್ಷಣೆ ಮಾಡಿ ದೇವನಹಳ್ಳಿಯ ಶಿಶುಮಂದಿರದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಕಲ್ಯಾಣ ಸಮಿತಿ ಎದುರು ಮಗುವನ್ನು ಹಾಜರುಪಡಿಸಿ ಅವರ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಸೋಮವಾರ ಸಮಿತಿ ಆದೇಶ ಬರಲಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಲಿದ್ದು, ಮುಂದಿನ ತನಿಖೆ ನಡೆಯಲಿದೆ.

- ಅನಿತಾಲಕ್ಷ್ಮೀ, ಜಿಲ್ಲಾ ಮಕ್ಕಳ ಕಲ್ಯಾಣಾಧಿಕಾರಿ, ಬೆಂ.ಗ್ರಾಮಾಂತರ

ಮನೆಯ ತಳಮಹಡಿಯಲ್ಲಿ ದೊಡ್ಡದಾದ ಗುಂಡಿ ತೆಗೆಯಲಾಗಿದೆ. ವಿಚಾರಣೆ ವೇಳೆ ದಂಪತಿ ಗೊಂದಲದ ಹೇಳಿಕೆಗಳನ್ನು ನೀಡಿದ್ದಾರೆ. ಇವೆಲ್ಲವೂ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಗೆ ವರದಿ ಮಾಡಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ಸಹಾಯವಾಣಿ ಹಾಗೂ ಪೊಲೀಸರ ಸಹಕಾರದೊಂದಿಗೆ ಯಶಸ್ವಿಯಾಗಿ ಕಾರ್ಯಾಚರಣೆ ಮಾಡಲಾಗಿದೆ.

- ಶ್ರೀಧರ್, ಮಕ್ಕಳ ರಕ್ಷಣಾಧಿಕಾರಿ ಬೆಂ.ಗ್ರಾ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News