ರಾಜ್ಯ ರಾಜಕೀಯದಿಂದ ದೂರ ಸರಿಯುವುದಿಲ್ಲ: ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಜ.15: "ರಾಜ್ಯ ರಾಜಕೀಯದಿಂದ ದೂರ ಸರಿಯುವುದಿಲ್ಲ. ನಾನು ರಾಜಕಾರಣದಲ್ಲಿ ಇದ್ದೇನೆ. ನಾನು ಎಲ್ಲಿರಬೇಕು ಎಂದು ತೀರ್ಮಾನ ಮಾಡುವುದು ರಾಜ್ಯದ ಜನತೆ. ರಾಜ್ಯ ರಾಜಕೀಯಕ್ಕೆ ಯಾವಾಗ ಬರಬೇಕು ಎಂದು ಜನತೆಯ ಆಶಯದ ಮೇರೆಗೆ ತೀರ್ಮಾನ ಮಾಡುತ್ತೇನೆ" ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮದವರ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ನಾವು ಎನ್ ಡಿಎ ಮೈತ್ರಿಯಲ್ಲಿದ್ದೇವೆ. ಈ ಮೈತ್ರಿಯಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಕೊಡಬಾರದು. ನಮ್ಮ ಉದ್ದೇಶ ರಾಜ್ಯದಲ್ಲಿ ಉತ್ತಮ ಸರ್ಕಾರ ತರಬೇಕು ಎನ್ನುವುದು. ಇದು ನನ್ನ ವೈಯಕ್ತಿಕ ಉದ್ದೇಶ ಎಂದರು.
ನಾನು ರಾಜ್ಯ ರಾಜಕೀಯದಿಂದ ದೂರ ಸರಿಯುತ್ತೇನೆ ಅಂತ ಯಾರಾದರೂ ತಿಳಿದುಕೊಂಡಿದ್ದರೆ ತಪ್ಪು. ನಾನು ರಾಜ್ಯ ರಾಜಕಾರಣದಿಂದ ದೂರ ಸರಿಯಲ್ಲ. ರಾಜ್ಯದ ರಾಜಕಾರಣದಲ್ಲಿ ಇರುತ್ತೇನೆ. ಕೇಂದ್ರದಲ್ಲಿ ಪ್ರಧಾನಿಗಳು ಉತ್ತಮ ಜವಾಬ್ದಾರಿ ಕೊಟ್ಟಿದ್ದಾರೆ. ಎರಡು ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಅವಕಾಶ ನೀಡಿದ್ದಾರೆ. ರಾಜ್ಯ ರಾಜಕೀಯಕ್ಕೆ ಯಾವ ಸಮಯದಲ್ಲಿ ಬರಬೇಕು ಅಂತ ತೀರ್ಮಾನ ಮಾಡುತ್ತೇನೆ. ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಶಿಡ್ಲಘಟ್ಟ ಪ್ರಕರಣ; ಮುಖ್ಯ ಕಾರ್ಯದರ್ಶಿ ಇನ್ನೂ ಸ್ಪಂದಿಸಿಲ್ಲ ಎಂದ ಕುಮಾರಸ್ವಾಮಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ನಿರಂತರವಾಗಿ ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದು ಸರಿಯಲ್ಲ, ಶಿಡ್ಲಘಟ್ಟ ಪ್ರಕರಣದ ಬಗ್ಗೆ ನಾನು ಈಗಾಗಲೇ ಮುಖ್ಯ ಕಾರ್ಯದರ್ಶಿಯವರಿಗೆ ತಿಳಿಸಿದ್ದೇನೆ. ಈವರೆಗೆ ಅವರು ಈ ಬಗ್ಗೆ ಯಾವ ಕ್ರಮವನ್ನು ವಹಿಸಿಲ್ಲ. ಇವತ್ತು ಸಂಕ್ರಾಂತಿ ಹಬ್ಬವಿದೆ. ಹೀಗಾಗಿ ನಾನು ಮತ್ತೆ ಅವರನ್ನು ಕೇಳಲು ಹೋಗಿಲ್ಲ ಎಂದು ಸಚಿವ ಕುಮಾರಸ್ವಾಮಿ ಹೇಳಿದರು.
ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡನಿಂದ ಅಧಿಕಾರಿಗೆ ಧಮ್ಕಿ ಹಾಕಿದ ಪ್ರಕರಣ ನಿಜಕ್ಕೂ ಬೇಸರ ತರಿಸಿದೆ. ನಮ್ಮ ಪಕ್ಷ ಅಂತಲ್ಲ, ಯಾವುದೇ ಪಕ್ಷದ ಕಾರ್ಯಕರ್ತರು, ಮುಖಂಡರು ಅಧಿಕಾರಿಗಳ ಜತೆ ಅನುಚಿತವಾಗಿ ವರ್ತಿಸಬಾರದು. ಒಂದೆರಡು ಪ್ರಕರಣಗಳಲ್ಲಿ ಕಠಿಣ ಕ್ರಮ ಜರುಗಿಸಿದರೆ ಅದು ಪಾಠವಾಗುತ್ತದೆ ಎಂದು ಕುಮಾರಸ್ವಾಮಿ ಸರಕಾರಕ್ಕೆ ಸಲಹೆ ಮಾಡಿದರು.
ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕೆಲಸ ಮಾಡಿಸುವ ಪ್ರವೃತ್ತಿ ಸರ್ಕಾರದಲ್ಲಿ ವ್ಯಾಪಕವಾಗಿದೆ. ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ಅಧಿಕಾರದಲ್ಲಿರುವ ಮೇಲಿನವರು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಕಾನೂನುಬಾಹಿರ ಕೆಲಸ ಮಾಡಿಸುತ್ತಿದ್ದಾರೆ. ಸರ್ಕಾರ ಸರಿ ಇಲ್ಲದೆ ಇಲ್ಲದಿದ್ದಾಗ ಇವೆಲ್ಲ ನಡೆಯುತ್ತವೆ. ಮೇಟಿ ಸರಿಯಾಗಿದ್ದರೆ ಇಂತಹ ಘಟನೆಗಳು ನಡೆಯುವುದಿಲ್ಲ ಎಂದು ಕೇಂದ್ರ ಸಚಿವರು ತೀವ್ರ ಬೇಸರ ವ್ಯಕ್ತಪಡಿಸಿದರು.
ಅಧಿಕಾರಿಗಳು ಕೂಡ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಬಡ್ತಿ ಅಥವಾ ಪೋಸ್ಟಿಂಗ್ ಆಸೆಗೆ ಬಿದ್ದು ಕಾನೂನುಬಾಹಿರ ಕೆಲಸ ಮಾಡಿದರೆ ಪ್ರತಿಫಲ ಅನುಭವಿಸಬೇಕಾಗುತ್ತದೆ. ಇತ್ತೀಚೆಗೆ ಒಂದು ಪತ್ರಿಕೆಯ ಅಗ್ರಬರಹವನ್ನು ಓದಿದೆ. 'ಕಳಪೆ ಕಾಮಗಾರಿ; ಆರು ಮಂದಿ ಹೊಣೆ' ಎನ್ನುವ ವರದಿ ನೋಡಿದ ಮೇಲೆ ವಿಕಾಸಸೌಧ ನಿರ್ಮಾಣದಲ್ಲಿ ಎಂಜಿನಿಯರುಗಳು ನಡೆಸಿರುವ ಅಕ್ರಮ ನಡೆಸಿರುವುದು ಬಯಲಾಗಿದೆ. 8 ವರ್ಷಗಳ ನಂತರ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು ಅಂತ ಲೋಕಾಯುಕ್ತ ತೀರ್ಪು ಕೊಟ್ಟಿದೆ. ಹೀಗಾಗಿ ಅಧಿಕಾರಿಗಳು ಜನಪ್ರತಿನಿಧಿಗಳ ಒತ್ತಡಕ್ಕೆ ಕೆಲಸ ಮಾಡಬಾರದು. ಸರ್ಕಾರದ ನಿಯಮಾವಳಿ ಉಲ್ಲಂಘನೆ ಆಗದಂತೆ ಆತ್ಮಸಾಕ್ಷಿಗಾಗಿ ಕೆಲಸ ಮಾಡಿ ಎಂದು ಕೇಂದ್ರ ಸಚಿವರು ಕಿವಿಮಾತು ಹೇಳಿದರು.