ಧರ್ಮಸ್ಥಳ ಪ್ರಕರಣದ ಬಗ್ಗೆ ಸದನದಲ್ಲಿ ಪ್ರಶ್ನಿಸಿದರೆ ಉತ್ತರ ನೀಡುತ್ತೇವೆ: ಗೃಹಸಚಿವ ಪರಮೇಶ್ವರ್
ಧರ್ಮಸ್ಥಳ ಪ್ರಕರಣದ ಬಗ್ಗೆ ಸದನದಲ್ಲಿ ಪ್ರಶ್ನಿಸಿದರೆ ಉತ್ತರ ನೀಡುತ್ತೇವೆ: ಗೃಹಸಚಿವ ಪರಮೇಶ್ವರ್
ಗೃಹ ಸಚಿವ ಡಾ.ಜಿ.ಪರಮೇಶ್ವರ್ (PTI)
ಬೆಂಗಳೂರು, ಡಿ.6: ಧರ್ಮಸ್ಥಳ ಪ್ರಕರಣದ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡಿದರೆ ಉತ್ತರ ನೀಡುತ್ತೇವೆ. ಎಸ್ ಐಟಿಯವರು ಕೋರ್ಟ್ ಗೆ ಮತ್ತು ಸರಕಾರಕ್ಕೆ ವರದಿ ನೀಡಿದ್ದಾರೆ. ಸದನದಲ್ಲಿ ಪ್ರಸ್ತಾಪ ಮಾಡಿದರೆ ಹೇಳುತ್ತೇವೆ. ವಸ್ತುಸ್ಥಿತಿ ಏನಿದೆ ಎಂಬುದನ್ನು ಹೇಳಬೇಕಲ್ಲ. ಇದರಲ್ಲಿ ಮುಚ್ಚುಮರೆ ಏನಿದೆ? ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹೇಗಿದೆ ಎಂಬುದನ್ನು ಸಮಂಜಸವಾದ ಉತ್ತರವನ್ನು ಸದನಕ್ಕೆ ನೀಡುತ್ತೇನೆ ಎಂದು ತಿಳಿಸಿದರು.
ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ
ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂಬುದನ್ನು ಅಂಕಿ-ಅಂಶಗಳು ಹೇಳುತ್ತವೆ. ಯಾವುದೇ ಘಟನೆ ನಡೆದಿಲ್ಲ ಎಂದು ಹೇಳುವುದಿಲ್ಲ. ಅವರು ಆಡಳಿತ ನಡೆಸಿದಾಗ ಹೇಗಿತ್ತು, ಈಗ ಏನಿದೆ ಎಂಬುದನ್ನು ತಿಳಿಸುತ್ತೇನೆ ಎಂದು ಗೃಹ ಸಚಿವರು ಹೇಳಿದರು.
ಬಿಜೆಪಿ ಆಡಳಿತ ನಡೆಸುತ್ತಿರುವ ಬೇರೆ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಯಾವ ರೀತಿ ಇದೆ. ಬಿಜೆಪಿಯವರ ಅಧಿಕಾರಾವಧಿಯಲ್ಲಿ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹೇಗಿತ್ತು, ಕಳೆದ ಎರಡು ವರ್ಷದಿಂದ ಹೇಗಿದೆ ಎಂಬುದನ್ನು ಸದನದಲ್ಲಿ ಹೇಳುತ್ತೇನೆ ಎಂದರು.
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಡೆದ ಘಟನೆಗಳು ಯಾವ ಸರಕಾರ ಅಧಿಕಾರದಲ್ಲಿತ್ತು ಎಂಬುದನ್ನು ಹೇಳುತ್ತೇನೆ. ನಾವು ಆಡಳಿತ ನಡೆಸುವಾಗ ಅಗಿದೆ ಎಂದಾಗ ಸೂಕ್ತವಾದ ಕ್ರಮ ತೆಗೆದುಕೊಂಡಿದ್ದೇವೆ. ಹಳೇ ವೀಡಿಯೋಗಳನ್ನು ಹಾಕಿ, ಈಗ ನಡೆದಿದ್ದು ಹೇಳಿರುವುದಕ್ಕೆ ಪ್ರತಿಯೊಂದು ಘಟನೆಯನ್ನು ತಿಳಿಸುತ್ತೇನೆ ಎಂದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡನ ಹತ್ಯೆ ಪ್ರಕರಣವನ್ನು ಸ್ಥಳೀಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಯಾವ ಕಾರಣದಿಂದ ಹತ್ಯೆಯಾಗಿದೆ ಎಂಬುದರ ಬಗ್ಗೆ ತನಿಖೆಯ ವರದಿ ಬಂದರೆ ಗೊತ್ತಾಗುತ್ತದೆ. ಸ್ಥಳೀಯ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.
ರಾಜಕೀಯ ಮಾತನಾಡಿದರೆ ತಪ್ಪೇನು?
ಸಚಿವರು ಪರಸ್ಪರ ಭೇಟಿಯಾಗುತ್ತಿರುವ ವಿಚಾರದ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮ ಕ್ಷೇತ್ರಕ್ಕೆ ಮತ್ತು ಜಿಲ್ಲೆಗೆ ಕೆಲಸಗಳಾಗಬೇಕು. ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಸಚಿವರಿದ್ದಾರೆ. ಬಹಳ ಮುಖ್ಯವಾದ ಖಾತೆ. ಹೀಗಾಗಿ ಭೇಟಿ ಮಾಡಲು ಹೋಗಿರುತ್ತೇವೆ. ಕೆಲವು ಸಂದರ್ಭಗಳಲ್ಲಿ ರಾಜಕೀಯ ಮಾತನಾಡಲು ಹೋಗಿರುತ್ತೇವೆ. ಇದರಲ್ಲಿ ಮುಚ್ಚುಮರೆ ಏನಿದೆ ಎಂದ ಅವರು, ಐವರು ಎರಡು ಸಲ ಊಟಕ್ಕೆ ಸೇರಿ ರಾಜಕೀಯ ಮಾತನಾಡಿದ್ದೆವು. ಇದರಲ್ಲಿ ತಪ್ಪೇನಿದೆ?.
ನಾವೆಲ್ಲ ರಾಜಕಾರಣಿಗಳಲ್ಲವೇ? ನಾವು ಮಾಡುತ್ತಿರುವುದೇ ರಾಜಕಾರಣ. ಪಕ್ಷದ ಸಿದ್ಧಾಂತಗಳೇನು, ಸರಕಾರದಲ್ಲಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆಯೇ, ಇಲ್ಲವೇ? ಎಂಬುದು ಸೇರಿದಂತೆ ಇತ್ತೀಚಿನ ಬೆಳವಣಿಗೆಗಳ ಬಗ್ಗೆಯೂ ಮಾತನಾಡಿರುತ್ತೇವೆ. ಅದರಲ್ಲಿ ನಿಮಗೆ ಆಶ್ಚರ್ಯ ತರುವಂಥದ್ದು ಏನು ಇಲ್ಲ ಎಂದು ಗೃಹಸಚಿವರು ಪ್ರತಿಕ್ರಿಯಿಸಿದರು.
ಮಂಗಳವಾರ ನಡೆಯುವ ಸಿಎಲ್ಪಿ ಸಭೆಯಲ್ಲಿ ಸದನಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಚರ್ಚೆಗೆ ನಮ್ಮ ಪಕ್ಷದ ಶಾಸಕರು, ಸಚಿವರು ಯಾವ ರೀತಿ ಉತ್ತರಿಸಬೇಕು ಎಂಬುದರ ಕುರಿತು ಚರ್ಚೆ ಮಾಡುತ್ತೇವೆ. ಅಲ್ಲಿ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆಯಾಗುವುದಿಲ್ಲ. ಈ ಬಗ್ಗೆ ನಿರೀಕ್ಷೆಯೂ ಇಟ್ಟುಕೊಳ್ಳಬೇಡಿ ಎಂದರು.