ಬೆಂಗಳೂರು| ಐಪಿಎಲ್ ಪಂದ್ಯ ವೀಕ್ಷಣೆ ವೇಳೆ ಯುವತಿಯೊಂದಿಗೆ ಅನುಚಿತ ವರ್ತನೆ ಆರೋಪ: ಪ್ರಕರಣ ದಾಖಲು
ಬೆಂಗಳೂರು: ಐಪಿಎಲ್ ಕ್ರಿಕೆಟ್ ಪಂದ್ಯ ವೀಕ್ಷಣೆ ವೇಳೆಯಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ ಆರೋಪದಡಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರ ಪತಿಯ ವಿರುದ್ಧ ಇಲ್ಲಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 3ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿರುವ ಡೈಮಂಡ್ ಬಾಕ್ಸ್ ನಲ್ಲಿ ಐಪಿಎಸ್ ಅಧಿಕಾರಿಯ ಕುಟುಂಬಸ್ಥರು ಹಾಗೂ ಐಟಿ ಅಧಿಕಾರಿಯೊಬ್ಬರ ಪತಿಯ ನಡುವೆ ಗಲಾಟೆ ನಡೆದಿದ್ದು, ತನ್ನ ಪುತ್ರಿಯೊಂದಿಗೆ ಅನುಚಿತವಾಗಿ ವರ್ತಿಸಲಾಗಿದೆ ಎಂದು ಆರೋಪಿಸಿ ಐಪಿಎಸ್ ಅಧಿಕಾರಿಯ ಪತ್ನಿ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
26 ವರ್ಷ ವಯಸ್ಸಿನ ತನ್ನ ಪುತ್ರಿ ಹಾಗೂ 22 ವರ್ಷ ವಯಸ್ಸಿನ ಪುತ್ರ ಕ್ರಿಕೆಟ್ ಪಂದ್ಯ ವೀಕ್ಷಿಸಲು ತೆರಳಿದ್ದರು. ಮೇ 3ರ ರಾತ್ರಿ 9:40ರ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಗ್ಯಾಲರಿಯಲ್ಲಿದ್ದ ತಮ್ಮ ಮಕ್ಕಳೊಂದಿಗೆ ಕಾರಣವಿಲ್ಲದೆ ಕಿರುಚಾಡಿ, ಬೆದರಿಕೆ ಹಾಕಿದ್ದಾನೆ. ಅಲ್ಲದೆ, ತಮ್ಮ ಪುತ್ರಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಅಪರಿಚಿತ ದಂಪತಿಗಳು ತಮ್ಮ ಮಕ್ಕಳನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು, ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.