×
Ad

ವೀರಶೈವ ಲಿಂಗಾಯತ ಮಹಾಸಭಾದ ನೂತನ ಅಧ್ಯಕ್ಷರಾಗಿ ಈಶ್ವರ್‌ ಖಂಡ್ರೆ ಆಯ್ಕೆ

Update: 2026-01-20 18:55 IST

ಬೆಂಗಳೂರು : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯಾಧ್ಯಕ್ಷರಾಗಿ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಮಹಾದೇವ ಬಿದರಿ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ನಡೆದ ಮಹಾಸಭಾದ ಕಾರ್ಯಕಾರಿಣಿ ಸಭೆಯಲ್ಲಿ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಮಹಾ ಪ್ರಧಾನ ಕಾರ್ಯದರ್ಶಿಯಾಗಿರುವ ಈಶ್ವರ ಬಿ.ಖಂಡ್ರೆ ಅವರನ್ನು ಆಯ್ಕೆ ಮಾಡಲು ನಿರ್ಣಯ ಕೈಗೊಳ್ಳಲಾಯಿತು ಎಂದು ಅವರು ಹೇಳಿದರು.

ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರನ್ನು ಆಯ್ಕೆ ಮಾಡಲು ಎಲ್ಲ ಸದಸ್ಯರೂ ಒಮ್ಮತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ನಡೆಯಿತು. 13 ವರ್ಷಗಳಿಂದ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಈಶ್ವರ ಖಂಡ್ರೆ ಅವರು ಒಂದು ವರ್ಷದಿಂದ ಹಿರಿಯ ಉಪಾಧ್ಯಕ್ಷರ ಪ್ರಭಾರ ಹೊಣೆಯನ್ನೂ ನಿಭಾಯಿಸಿದ್ದರು. ಭೀಮಣ್ಣ ಖಂಡ್ರೆಯವರ ಮಾರ್ಗದಲ್ಲೇ ನಡೆದು, ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿರುವ ಈಶ್ವರ ಬಿ. ಖಂಡ್ರೆ ಇದೀಗ ಮಹಾಸಭಾದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಸಮಾಜಕ್ಕೆ ಹೊಸ ಭರವಸೆ ಮೂಡಿಸಿದ್ದಾರೆ ಎಂದು ಹೇಳಿದ್ದಾರೆ.

ತಮ್ಮನ್ನು ಮಹಾಸಭಾದ ನೂತನ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಕಾರ್ಯಕಾರಿ ಸಮಿತಿಗೆ ಧನ್ಯವಾದ ಅರ್ಪಿಸಿದ ಈಶ್ವರ್ ಖಂಡ್ರೆ ಅವರು, ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆಯಲ್ಲ. ಹೀಗಾಗಿ ಸಮಾಜದ ಎಲ್ಲ ಒಳ ಪಂಗಡಗಳನ್ನು ಒಗ್ಗೂಡಿಸುವುದು ಅತ್ಯಂತ ಮುಖ್ಯವಾಗಿದ್ದು, ತಾವು ಈ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದು ತಿಳಿಸಿದರು.

ವೀರಶೈವ ಲಿಂಗಾಯತ ಸಮಾಜ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಈ ನಾಡಿನ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅನುಪಮವಾದ್ದು. ನಮ್ಮ ಸಮಾಜದಲ್ಲೂ ಶೇ.40ರಿಂದ 50ರಷ್ಟು ಬಡವರಿದ್ದು, ಶೇ.30ಕ್ಕಿಂತ ಹೆಚ್ಚು ಜನರು ಹಿಂದುಳಿದಿದ್ದಾರೆ. ಸಾಮಾಜಿಕ ನ್ಯಾಯ ಎಲ್ಲರಿಗೂ ದೊರಕಬೇಕು. ಹೀಗಾಗಿ ಎಲ್ಲರಿಗೂ ಸಮಾನ ನ್ಯಾಯ ದೊರಕಿಸಲು ನೂತನ ಅಧ್ಯಕ್ಷನಾಗಿ ಶ್ರಮಿಸುತ್ತೇನೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಹಾಸ್ಟೆಲ್ ನಿರ್ಮಿಸಲು ಬದ್ಧ: ಬೆಂಗಳೂರು ನಗರದಲ್ಲಿ 1ಸಾವಿರ ವಿದ್ಯಾರ್ಥಿನಿಯರಿಗಾಗಿ ವಸತಿ ನಿಲಯ ನಿರ್ಮಾಣ ಮಾಡಲು ಮುಂದಿನ ಮಾರ್ಚ್ ತಿಂಗಳೊಳಗೆ ಶಂಕುಸ್ಥಾಪನೆ ನೆರವೇರಿಸಿ, ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು. ಈಗಾಗಲೇ ಹಲವು ಜಿಲ್ಲಾ ಕೇಂದ್ರಗಳಲ್ಲಿ ವೀರಶೈವ ಲಿಂಗಾಯತ ಭವನ ಇದ್ದು, ಭವನ ಇಲ್ಲದ ಜಿಲ್ಲೆಗಳಲ್ಲಿ ಭವನ ನಿರ್ಮಾಣ ಮಾಡಲೂ ಶ್ರಮಿಸುವೆ ಎಂದರು.

ಎಲ್ಲ ಸ್ವಾಮೀಜಿಗಳ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ ಕೆಲಸ ಮಾಡುವೆ. ಒಗ್ಗಟ್ಟಿನಲ್ಲಿ ಬಲವಿದೆ, ವಿಘಟನೆಯಲ್ಲಿ ದೌರ್ಬಲ್ಯವಿದೆ, ಎಲ್ಲ ಜಾತಿ, ಜನಾಂಗದವರನ್ನೂ ಜೊತೆಯಲ್ಲಿ ತೆಗೆದುಕೊಂಡು ಶ್ರಮಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ತಮ್ಮ ಸಮಾಜಕ್ಕೆ ಸುದೀರ್ಘ ಇತಿಹಾಸ ಇದೆ, ಭವ್ಯತೆ ಇದೆ, ಶ್ರೇಷ್ಠತೆಯೂ ಇದೆ. ಮಾನವ ಧರ್ಮಕ್ಕೆ ಜಯವಾಗಲೀ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದ ನಮ್ಮ ಹಿರಿಯರು ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ್ದಾರೆ. ಲೋಕ ಕಲ್ಯಾಣಕ್ಕಾಗಿ, ಜನರ ಒಳಿತಿಗಾಗಿ, ಸಮಾಜದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಗಣೇಶ್ ಶಾಮನೂರು, ಪ್ರಭಾಕರ ಕೋರೆ, ರಾಜಣ್ಣ, ವೀರಣ್ಣ ಚರಂತಿಮಠ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಘಟಕದ ಅಧ್ಯಕ್ಷರು, ಪ್ರತಿನಿಧಿಗಳು ಪಾಲ್ಗೊಂಡಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News