ಮಹಾರಾಷ್ಟ್ರದಲ್ಲಿ ಸ್ಥಳೀಯ ಚುನಾವಣೆ: ಜೆಡಿಎಸ್ ಪಕ್ಷದ ಐವರು ಅಭ್ಯರ್ಥಿಗಳು ಜಯ
ಬೆಂಗಳೂರು : ಮಹಾರಾಷ್ಟ್ರದಲ್ಲಿ ಇತ್ತೀಚಿಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‍ನ ಐವರು ಅಭ್ಯರ್ಥಿಗಳು(ಕೌನ್ಸಿಲರ್ ಸ್ಥಾನ) ಚುನಾಯಿತರಾಗಿರುವುದಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮಹಾರಾಷ್ಟ್ರದ ಜೆಡಿಎಸ್ ರಾಜ್ಯಾಧ್ಯಕ್ಷ ಶ್ರೀನಾಥ ಹರಿಬಾಹು ಶೇವಾಲೆ ಅವರಿಗೆ ಪತ್ರ ಬರೆದಿರುವ ಎಚ್.ಡಿ.ದೇವೇಗೌಡ, ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಆಯ್ಕೆಯಾಗಿರುವ ಐದು ಮಂದಿ ಕೌನ್ಸಿಲರ್‍ಗಳನ್ನು ಅಭಿನಂದಿಸಿದ್ದಾರೆ.
ಕೊಲ್ಲಾಪುರ ಜಿಲ್ಲೆಯ ಗಧಿಂಗ್ಲಾಜ್ ಪರಿಷತ್‍ನಲ್ಲಿ ಜೆಡಿಎಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಸಂಜಯ್ ರೋಟೆ, ಸ್ವಾತಿ ತೈಕೋರಿ, ನಿತಿನ್ ದೇಸಾಯಿ ಹಾಗೂ ಪೂರ್ಣಾ ಪರಿಷತ್‍ನಲ್ಲಿ ಸ್ಪರ್ಧಿಸಿದ್ದ ಪ್ರಕಾಶ್ ಕಾಂಬ್ಳೆ, ರೇಖಾ ಖಾರ್ಗ್‍ಖರಾತಿ ಅವರು ಚುನಾಯಿತರಾಗಿದ್ದಾರೆ.
ಇದು ಪಕ್ಷ ಮಹಾರಾಷ್ಟ್ರದಲ್ಲಿ ಬಲಗೊಳ್ಳುತ್ತಿರುವುದರ ಸೂಚನೆಯಾಗಿದ್ದು, ಈ ಗೆಲುವು ಒಂದು ಮೈಲಿಗಲ್ಲಾಗಿದೆ. ಮುಂಬರುವ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆ ಹಾಗೂ ಭವಿಷ್ಯದ ಚುನಾವಣೆಗಳಲ್ಲಿ ಇನ್ನೂ ಹೆಚ್ಚಿನ ಸ್ಥಾನಗಳನ್ನು ಜೆಡಿಎಸ್ ಗಳಿಸುವ ವಿಶ್ವಾಸವಿದೆ ಎಂದು ಅವರು ಉಲ್ಲೇಖಿಸಿದ್ದಾರೆ.