Karnataka Budget | ಅಂಬೇಡ್ಕರ್ ಹೆಸರಿನಲ್ಲಿ CBSE ಪಠ್ಯಕ್ರಮದ ನಾಲ್ಕು ಕ್ರೈಸ್ ವಸತಿ ಶಾಲೆ ಸ್ಥಾಪನೆ
ಸಮಾಜ ಕಲ್ಯಾಣ: ಸಮಗ್ರ ಮಾಹಿತಿ
PC : x/@siddaramaiah
ಬೆಂಗಳೂರು: ಡಾ.ಬಿ.ಆರ್.ಅಂಬೇಡ್ಕರ್ ಭೇಟಿ ನೀಡಿದ ಸ್ಥಳಗಳಾದ ಕಲಬುರಗಿ, ವಿಜಯಪುರ, ಬೆಳಗಾವಿ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಅವರ ಹೆಸರಿನಲ್ಲಿ CBSE ಪಠ್ಯಕ್ರಮದ ನಾಲ್ಕು ಕ್ರೈಸ್ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿಂದು ಮಂಡಿಸಿದ 2026-27ನೇ ಸಾಲಿನ ಬಜೆಟ್ ನಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿನ ಯೋಜನೆಗಳ ಬಗ್ಗೆ ವಿವರಿಸಿದರು.
75 ಲಕ್ಷ ವಿದ್ಯಾರ್ಥಿಗಳಿಗೆ 2,676 ಕೋಟಿ ರೂ.ಗಳ ವಿದ್ಯಾರ್ಥಿ ವೇತನ, 2,231 ವಿದ್ಯಾರ್ಥಿಗಳಿಗೆ 389 ಕೋಟಿ ರೂ.ಗಳ ಶೈಕ್ಷಣಿಕ ಸಾಲ ಮತ್ತು 18 ಲಕ್ಷ ವಿದ್ಯಾರ್ಥಿಗಳಿಗೆ 1,273 ಕೋಟಿ ರೂ.ಗಳಷ್ಟು ಶುಲ್ಕ ಮರುಪಾವತಿ ಮಾಡಲಾಗಿದೆ.
ರಾಜ್ಯದಲ್ಲಿ 5,306 ವಿದ್ಯಾರ್ಥಿ ನಿಲಯ ಮತ್ತು 1,258 ವಸತಿ ಶಾಲೆಗಳನ್ನು ಹಾಗೂ 300 ಮೌಲಾನ ಆಝಾದ್ ಶಾಲೆಗಳಲ್ಲಿ 13.30 ಲಕ್ಷ ಮಕ್ಕಳ ಶಿಕ್ಷಣಕ್ಕಾಗಿ 15,081 ಕೋಟಿ ರೂ. ಒದಗಿಸಲಾಗಿದೆ.
ಕೌಶಲ್ಯ ಮತ್ತು ಜೀವನೋಪಾಯಕ್ಕೆ ನೆರವು: ಸಬ್ಸಿಡಿ ಆಧಾರಿತ ಸಣ್ಣ ಉದ್ಯಮಗಳಿಂದ ಸುಸ್ಥಿರ ಆದಾಯ ಮೂಲಗಳನ್ನು ಸೃಜಿಸುವ ಉದ್ಯಮಶೀಲತೆಗೆ ಉತ್ತೇಜನೆ ಮತ್ತು ಆರ್ಥಿಕ ಸಬಲೀಕರಣಕ್ಕೆ ಆದ್ಯತೆ ನೀಡುವುದು.
ಸ್ವಾವಲಂಬಿ ಸಾರಥಿ ಯೋಜನೆಯಡಿ 8,195 ಫಲಾನುಭವಿಗಳಿಗೆ 249 ಕೋಟಿ ರೂ.ಗಳ ಸಾಲ, ಗಂಗಾಕಲ್ಯಾಣ ಯೋಜನೆಯಡಿ 21,556 ಫಲಾನುಭವಿಗಳಿಗೆ 637 ಕೋಟಿ ರೂ.ಗಳು ಮತ್ತು 2,928 ಫಲಾನುಭವಿಗಳಿಗೆ ಭೂಮಿ ಒದಗಿಸಲು 421 ಕೋಟಿ ರೂ.ಗಳನ್ನು ನೀಡಲಾಗಿದೆ.
ಮೂಲಸೌಕರ್ಯ ಅಭಿವೃದ್ಧಿ:
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಕಾಲೋನಿಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 1,332 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ.
ಅರಣ್ಯ ಹಾಗೂ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ 11 ಸಮುದಾಯಗಳ ವಸತಿರಹಿತ 6,257 ಕುಟುಂಬಗಳಿಗೆ 4.50 ಲಕ್ಷರೂ.ಗಳ ಘಟಕ ವೆಚ್ಚದಲ್ಲಿ ಒಟ್ಟು 282 ಕೋಟಿ ರೂ.ಗಳಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ.
ಅಲ್ಪಸಂಖ್ಯಾತರ ಕಾಲನಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲು 1,635 ಕೋಟಿ ರೂ.ಗಳ ವೆಚ್ಚದಲ್ಲಿ 3,662 ಕಾಮಗಾರಿಗಳನ್ನು ಅನುಮೋದಿಸಲಾಗಿದೆ.
ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಗಳಲ್ಲಿ 1,650 ಸಮುದಾಯ ಭವನ/ವಾಲ್ಮೀಕಿ ಭವನ/ಶಾದಿ ಮಹಲ್ ಗಳ ನಿರ್ಮಾಣಕ್ಕಾಗಿ 822 ಕೋಟಿ ರೂ.ಗಳನ್ನು ಮಂಜೂರು ಮಾಡಿ 732 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ.
ನಾಯಕತ್ವ ಮತ್ತು ಪ್ರಾತಿನಿಧ್ಯ: ಸರಕಾರದ ನೀತಿ ನಿರೂಪಣೆ ಹಾಗೂ ಅನುಷ್ಠಾನದಲ್ಲಿ ಹಿಂದುಳಿದವರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವುದು.
ಒಟ್ಟು 26,821 ವಿದ್ಯಾರ್ಥಿಗಳಿಗೆ ಸರಕಾರಿ ಉದ್ಯೋಗ/ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಕೌಶಲ್ಯಾಭಿವೃದ್ಧಿಗೆ ತರಬೇತಿ ನೀಡಲು 841 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ.
ಕರ್ನಾಟಕ ಅನುಸೂಚಿತ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯಡಿಯಲ್ಲಿ 2026-27ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪಯೋಜನೆಗೆ 31,804 ಕೋಟಿ ರೂ. ಹಾಗೂ ಬುಡಕಟ್ಟು ಉಪಯೋಜನೆಗೆ 12,828 ಕೋಟಿ ರೂ. ಗಳು ಸೇರಿದಂತೆ ಒಟ್ಟಾರೆ 44,632 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ.
ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಗಳ ಇತರ ನಿರ್ವಹಣಾ ವೆಚ್ಚದ ದರಗಳನ್ನು ಪರಿಷ್ಕರಿಸಲು 56 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗುವುದು.
ಸರಕಾರಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳಾದ
ಟೂ ಟಯರ್ ಕಾಟ್, ಕಾಯರ್ ಮ್ಯಾಟ್ರಸ್, ಸೋಲಾರ್ ವಾಟರ್ ಹೀಟರ್ ಮತ್ತು ಡೈನಿಂಗ್ ಟೇಬಲ್ಗಳನ್ನು ಒದಗಿಸಲು 25 ಕೋಟಿ ರೂ.ಗಳನ್ನು ಮೀಸಲಿರಿಸಿದೆ.
ಶೈಕ್ಷಣಿಕವಾಗಿ ಪ್ರಮುಖ ನಗರಗಳಲ್ಲಿ ವಿದ್ಯಾರ್ಥಿನಿಲಯಗಳಿಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಪ್ರತೀ ಜಿಲ್ಲೆಗೆ 150 ಸಂಖ್ಯಾಬಲದ ಒಂದು ಬಾಲಕಿಯರ ಮತ್ತು ಒಂದು ಬಾಲಕರ ಒಟ್ಟು 62 ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲಾಗುವುದು.
Right To Education Act ರಡಿ ಪ್ರವೇಶ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಪ್ರವೇಶ ಪಡೆದ ಶಾಲೆಗಳಲ್ಲೇ 9 ಮತ್ತು 10ನೇ ತರಗತಿಗಳಲ್ಲಿ ವ್ಯಾಸಂಗ ಮುಂದುವರಿಸಲು ಅವಕಾಶ ಕಲ್ಪಿಸಲು 19 ಕೋಟಿ ರೂ.ಗಳನ್ನು ಒದಗಿಸಲಾಗುವುದು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣಕ್ಕೆ ಅನುವು ಮಾಡಿಕೊಡಲು ಒಟ್ಟು 31 ವಸತಿ ಶಾಲೆಗಳನ್ನು ಉನ್ನತೀಕರಿಸಲಾಗುವುದು.
ವಸತಿ ಶಾಲೆಗಳಿಲ್ಲದ ಹೋಬಳಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಒಟ್ಟು 40 ಹೊಸ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು.
ಕ್ರೈಸ್ ವಸತಿ ಶಾಲೆಗಳಿಗೆ ಅಗತ್ಯವಿರುವ ಡೆಸ್ಕ್, ಬೆಂಚ್, ಪೀಠೋಪಕರಣಗಳು, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ ಮತ್ತು ವಿಜ್ಞಾನ ಪ್ರಯೋಗಾಲಯ, ಹಾಸಿಗೆ-ಹೊದಿಕೆ, ಟೂ ಟಯರ್ ಕಾಟ್, ಸೋಲಾರ್ ವಾಟರ್ ಹೀಟರ್, ಡೈನಿಂಗ್ ಟೇಬಲ್, ಸಿಸಿಟಿವಿ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ನೀಡಲು 50 ಕೋಟಿ ರೂ.ಗಳನ್ನು ಒದಗಿಸಲಾಗುವುದು.
ಪರಿಶಿಷ್ಟ ಜಾತಿಯ 20, ಪರಿಶಿಷ್ಟ ಪಂಗಡದ 5 ಮತ್ತು ಹಿಂದುಳಿದ ವರ್ಗಗಳ 5 ವಸತಿ ಶಾಲೆಗಳು ಸೇರಿದಂತೆ ನಿವೇಶನ ಲಭ್ಯವಿರುವ ಒಟ್ಟು 30 ಕ್ರೈಸ್ ವಸತಿ ಶಾಲೆಗಳಿಗೆ 22 ಕೋಟಿ ರೂ. ಘಟಕ ವೆಚ್ಚದಲ್ಲಿ ಒಟ್ಟಾರೆ 660 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು.
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿಯ ಎರಡು, ಪರಿಶಿಷ್ಟ ಪಂಗಡದ ಒಂದು ಮತ್ತು ಹಿಂದುಳಿದ ವರ್ಗಗಳ ಒಂದು ಸೇರಿದಂತೆ ಒಟ್ಟು ನಾಲ್ಕು ಕೈಸ್ ವಸತಿ ಶಾಲೆಗಳನ್ನು K-CET/JEE/NEET ಪರೀಕ್ಷೆಗಳಿಗೆ ಗುಣಮಟ್ಟದ
ತರಬೇತಿ ನೀಡಲು Centre of Excellenceಗಳನ್ನಾಗಿ ಉನ್ನತೀಕರಿಸಲಾಗುವುದು. ಈ ಶಾಲೆಗಳಿಗೆ ಪ್ರತ್ಯೇಕವಾದಪ್ರವೇಶ ಪರೀಕ್ಷೆಯ ಮೂಲಕ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಇದಕ್ಕಾಗಿ ಐದು ಕೋಟಿ ರೂ.ಗಳನ್ನು ಒದಗಿಸಲಾಗುವುದು.
ವಸತಿ ನಿಲಯ ಮತ್ತು ವಸತಿ ಶಾಲೆಗಳಲ್ಲಿ ಗುಣಮಟ್ಟದ ಆಹಾರ ಪೂರೈಸಲು ಪ್ರಾಯೋಗಿಕವಾಗಿ 50 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ, ಅಲ್ಲಿನ ವಿದ್ಯಾರ್ಥಿಗಳ ಮುಂದಾಳತ್ವದಲ್ಲಿ ಮೆಸ್ ಸಮಿತಿಯೊಂದನ್ನು ರಚಿಸಿ
ಕಾಲಕಾಲಕ್ಕೆ ಅಗತ್ಯ ಅನುದಾನವ ಮುಂಗಡವಾಗಿ ನೀಡಿ, ಪಾರದರ್ಶಕತೆ ಹಾಗೂ ಜವಾಬ್ದಾರಿಯುತ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ಈ ಪ್ರಯೋಗದ ಕಲಿಕೆಗಳನ್ನು ಅಳವಡಿಸಿಕೊಂಡು ಹಂತ ಹಂತವಾಗಿ ವಿಸ್ತರಿಸಲಾಗುವುದು.
ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗಳಿಂದ 6,562 ವಸತಿ ನಿಲಯಗಳಲ್ಲಿ ಮತ್ತು ವಸತಿ ಶಾಲೆಗಳಲ್ಲಿ ಪ್ರಸಕ್ತ 8.50 ಲಕ್ಷ ನಿಲಯಾರ್ಥಿಗಳಿದ್ದು, ಅವುಗಳ ನಿರ್ವಹಣೆಯಲ್ಲಿ ಸುಧಾರಣೆ ತರಲು ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯೋಗಸ್ಥ ಮಹಿಳೆಯರಿಗೆ ತಲಾ 50 ಸಂಖ್ಯಾಬಲದ10 ವಸತಿ ನಿಲಯಗಳನ್ನು ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಳಗಾವಿ ಮತ್ತು ಕಲಬುರಗಿಯಲ್ಲಿ ಪ್ರಾರಂಭಿಸಲಾಗುವುದು.
ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗಳಡಿ ಬರುವ ನಿಗಮಗಳಲ್ಲಿ ಮೈಕ್ರೊ ಕ್ರೆಡಿಟ್ ಪ್ರೇರಣಾ ಯೋಜನೆಯಡಿ ಸಾಲ ಮತ್ತು ಸಹಾಯಧನ ಪಡೆದ ಮಹಿಳಾ ಸ್ವ-ಸಹಾಯ ಸಂಘಗಳು ಸಾಲವನ್ನು ಸಕಾಲದಲ್ಲಿ ಪೂರ್ಣವಾಗಿ ಮರುಪಾವತಿಸಿದ ಸಂಘಗಳಿಗೆ ಎರಡನೇ ಬಾರಿಗೆ ಸಾಲ ಮತ್ತು ಸಹಾಯಧನ ಮಂಜೂರು ಮಾಡಲಾಗುವುದು.
ಶೈಕ್ಷಣಿಕ ಸೌಲಭ್ಯಗಳಿಂದ ವಂಚಿತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರತಿ ಕಂದಾಯ ವಿಭಾಗಕ್ಕೆ ಒಂದರಂತೆ ನಾಲ್ಕು ವಿಶೇಷ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ.ಗಳನ್ನು ಒದಗಿಸಲಾಗುವುದು.
ಡಾ.ಬಿ.ಆರ್.ಅಂಬೇಡ್ಕರ್ ಭೇಟಿ ನೀಡಿದ ಸ್ಥಳಗಳಾದ ಕಲಬುರಗಿ, ವಿಜಯಪುರ, ಬೆಳಗಾವಿ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಅವರಹೆಸರಿನಲ್ಲಿ CBSE ಪಠ್ಯಕ್ರಮದ ನಾಲ್ಕು ಕ್ರೈಸ್ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು.
ಸಮಾಜ ಕಲ್ಯಾಣ ಇಲಾಖೆಯಡಿ ಬೌದ್ಧ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗುವುದು.
ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಇಲಾಖೆಗಳ ಅಡಿಯಲ್ಲಿ ಬರುವ ನಿಗಮಗಳು ಗಂಗಾ ಕಲ್ಯಾಣ ಯೋಜನೆಯಡಿ ಪ್ರತಿ ಕೊಳವೆ ಬಾವಿಗಳ ವಿದ್ಯುದ್ದೀಕರಣಕ್ಕಾಗಿ ಪಾವತಿಸುವ ಮೊತ್ತವನ್ನು 75,000 ರೂ.ಗಳಿಂದ 1,50,000 ರೂ.ಗಳಿಗೆ ಹೆಚ್ಚಿಸಲಾಗುವುದು.
ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಿಗೆ 2026-27ನೇ ಸಾಲಿನಲ್ಲಿ 1,500 ಕೋಟಿ ರೂ.ಗಳನ್ನು ಒದಗಿಸಲಾಗುವುದು.
ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಲ್ಲಿ ಖಾಲಿ ಇರುವ 2,500 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು.