ಸೋನು ನಿಗಮ್ ವಿರುದ್ಧ ಕಠಿಣ ಕ್ರಮ ಕೈಗೊಂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
ಸೋನು ನಿಗಮ್ PC : instagram
ಬೆಂಗಳೂರು : ಕನ್ನಡ ಭಾಷೆ ಹಾಗೂ ಕನ್ನಡಿಗರ ಕುರಿತಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಖ್ಯಾತ ಗಾಯಕ ಸೋನು ನಿಗಮ್ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಠಿಣ ಕ್ರಮ ಜರುಗಿಸಿದ್ದು, ಇನ್ನು ಮುಂದೆ ಸೋನು ನಿಗಮ್ ಅವರಿಂದ ಯಾವುದೇ ಕನ್ನಡ ಸಿನಿಮಾಗಳಲ್ಲಿ ಹಾಡನ್ನು ಹಾಡಿಸದಂತೆ ಅಸಹಕಾರ ತೋರಲು ನಿರ್ಧರಿಸಲಾಗಿದೆ.
ಸೋಮವಾರ ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಚೇರಿಯಲ್ಲಿ ಅಧ್ಯಕ್ಷ ನರಸಿಂಹಲು ನೇತೃತ್ವದಲ್ಲಿ ಪದಾಧಿಕಾರಿಗಳು, ಸಂಗೀತ ನಿರ್ದೇಶಕರು, ಗಾಯಕರು, ನಿರ್ಮಾಪಕರ ಸಭೆ ನಡೆದಿದ್ದು, ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ನರಸಿಂಹಲು, ಗಾಯಕ ಸೋನು ನಿಗಮ್ ಅವರು ಈವರೆಗೂ ಕನ್ನಡಿಗರ ಕ್ಷಮೆ ಕೇಳಿಲ್ಲ. ಇನ್ನು ಮುಂದೆ ಅವರಿಂದ ಚಿತ್ರರಂಗದವರು ಮ್ಯೂಸಿಕಲ್ ನೈಟ್ಸ್ ಮಾಡುವುದಿಲ್ಲ. ಅವರ ಬಳಿ ಹಾಡನ್ನು ಹಾಡಿಸುವುದಿಲ್ಲ. ಈ ಕ್ಷಣದಿಂದಲೇ ಸೋನು ನಿಗಮ್ ಅವರಿಗೆ ಅಸಹಕಾರ ತೋರಬೇಕೆಂದು ನಿರ್ಧಾರ ಮಾಡಲಾಗಿದೆ ಎಂದರು.
ಸೋನು ನಿಗಮ್ ಅವರು ಪಹಲ್ಗಾಮ್ ಘಟನೆಯನ್ನು ಕನ್ನಡಿಗರಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಅವರ ವಿರುದ್ಧ ಮುಂದಿನ ದಿನಗಳಲ್ಲಿ ಯಾವ ರೀತಿಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಚರ್ಚಿಸಲಾಗುತ್ತಿದೆ. ಸೋನು ನಿಗಮ್ ಅವರು ಪಾಲ್ಗೊಳ್ಳುವ ಯಾವುದೇ ಕಾರ್ಯಕ್ರಮಗಳಲ್ಲಿ ವಾಣಿಜ್ಯ ಮಂಡಳಿಯ ಸದಸ್ಯರು ಪಾಲ್ಗೊಳ್ಳದಂತೆ ಸೂಚನೆ ನೀಡಲಾಗಿದೆ ಎಂದು ನರಸಿಂಹಲು ತಿಳಿಸಿದರು.
ಚಿತ್ರರಂಗದಲ್ಲಿ ಏಕಾಏಕಿ ಕಲಾವಿದರನ್ನು ನಿಷೇಧ ಮಾಡುವಂತಿಲ್ಲ. ಆದರೆ, ಸ್ವಯಂ ಪ್ರೇರಣೆಯಿಂದ ನಿರ್ಮಾಪಕರು, ಸಂಗೀತ ನಿರ್ದೇಶನಕರು ಗಾಯಕರನ್ನು ದೂರವಿಡಬಹುದು. ಕಲಾವಿದರಾಗಲಿ, ಗಾಯಕರಾಗಲಿ ಅಧಿಕೃತವಾಗಿ ನಿಷೇಧ ಮಾಡುವ ಅಧಿಕಾರ ವಾಣಿಜ್ಯ ಮಂಡಳಿಗೆ ಇರುವುದಿಲ್ಲ. ಗಾಯಕನನ್ನು ಕೆಲವು ವರ್ಷ ದೂರವಿಟ್ಟು ಯಾರೂ ಅವಕಾಶ ಕೊಡದೆ ಬುದ್ದಿ ಕಲಿಸಬಹುದು ಎಂದು ನರಸಿಂಹಲು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕುಮಾರ್, ಸಂಗೀತ ನಿರ್ದೇಶಕ ಧರ್ಮವಿಶ್, ನಿರ್ದೇಶಕರ ಸಂಘದ ಅಧ್ಯಕ್ಷ ವಿಶ್ವನಾಥ್, ಗಾಯಕಿ ಶಮಿತಾ ಮಲ್ನಾಡ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಏನಿದು ವಿವಾದ: ಬೆಂಗಳೂರಿನ ಖಾಸಗಿ ಕಾಲೇಜ್‍ವೊಂದರಲ್ಲಿ ಎಪ್ರಿಲ್ 25 ಹಾಗೂ 26ರಂದು ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಗಾಯಕ ಸೋನು ನಿಗಮ್ ಸಂಗೀತ ಪ್ರದರ್ಶನ ನೀಡುತ್ತಿದ್ದರು. ಈ ವೇಳೆ ಅಲ್ಲಿನ ವಿದ್ಯಾರ್ಥಿಗಳು ಕನ್ನಡ ಹಾಡು ಹಾಡುವಂತೆ ಮನವಿ ಮಾಡಿದ್ದರು. ಇದಕ್ಕೆ ಕೋಪಗೊಂಡಿದ್ದ ಸೋನು ನಿಗಮ್ ‘ಇದೇ ಕಾರಣಕ್ಕೆ ಪೆಹಲ್ಗಾಮ್‍ನಲ್ಲಿ ಭಯೋತ್ಪಾದಕ ದಾಳಿಯಾಗಿದ್ದು’ ಎಂಬುದಾಗಿ ಹೇಳಿಕೆ ನೀಡಿದ್ದರು. ಈ ವಿಡಿಯೋ ವೈರಲ್ ಆಗಿ ಗಾಯಕನ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.