ಆ.24ರೊಳಗಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ನೇಮಕ ಪ್ರಕ್ರಿಯೆ ಪೂರ್ಣ : ಕೆ.ಸಿ.ವೇಣುಗೋಪಾಲ್

Update: 2026-07-24 22:01 IST

ಕೆ.ಸಿ. ವೇಣುಗೋಪಾಲ್ | PC : PTI

ಬೆಂಗಳೂರು : ರಾಜ್ಯದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಆ.24ರೊಳಗಾಗಿ ಪೂರ್ಣಗೊಳಿಸಲಾಗುವುದು ಎಂದು ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದರು.

ಶುಕ್ರವಾರ ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಇಂದಿರಾ ಭವನದ ಭಾರತ್ ಜೋಡೋ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂಘಟನ್ ಸೃಜನ್ ಅಭಿಯಾನದ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರ ನೇಮಕ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಎಐಸಿಸಿ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿಯ ವೀಕ್ಷಕರ ಸಭೆಯನ್ನು ಕರೆಯಲಾಗಿತ್ತು. ಕಳೆದ ವರ್ಷ ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ಕಾಂಗ್ರೆಸ್ ಅಧ್ಯಕ್ಷತೆ ವಹಿಸಿದ 100ನೇ ವರ್ಷಾಚರಣೆ ಮಾಡಿದಾಗ, ಈ ವರ್ಷವನ್ನು ಸಂಘಟನೆಯ ವರ್ಷ ಎಂದು ಘೋಷಿಸಲಾಗಿತ್ತು. ಅದರಂತೆ, ಗುಜರಾತ್ ರಾಜ್ಯದಿಂದ ನಾವು ‘ಸಂಘಟನ್ ಸೃಜನ್’ ಅಭಿಯಾನ ಆರಂಭಿಸಿದೆವು ಎಂದು ಅವರು ಹೇಳಿದರು.

ಬೂತ್ ಮಟ್ಟದಿಂದ ಪ್ರದೇಶ ಕಾಂಗ್ರೆಸ್ ಸಮಿತಿವರೆಗೆ ಸಂಘಟನೆಗೆ ಒತ್ತು ನೀಡಲು ನಿರ್ಧರಿಸಲಾಗಿತ್ತು. ಅದರಂತೆ, ದೇಶದಲ್ಲಿರುವ 1054 ಜಿಲ್ಲೆಗಳ ಪೈಕಿ 762 ಜಿಲ್ಲೆಗಳಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನು ಘೋಷಣೆ ಮಾಡಿದ್ದೇವೆ. ಸಂಘಟನೆಯ ಅಭಿಯಾನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ನೇಮಕ ಅತ್ಯಂತ ಮಹತ್ವದಾಗಿದೆ. ಆನಂತರ, ಜಿಲ್ಲಾ, ಬ್ಲಾಕ್, ಮಂಡಲ್, ಬೂತ್ ಮಟ್ಟದ ಸಮಿತಿಗಳನ್ನು ರಚನೆ ಮಾಡಿ, ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ವೇಣುಗೋಪಾಲ್ ತಿಳಿಸಿದರು.

ರಾಜ್ಯದಲ್ಲಿರುವ 40 ಸಂಘಟನಾ ಜಿಲ್ಲೆಗಳಿಗೂ ಹಿರಿಯ ನಾಯಕರು, ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸದಸ್ಯರು, ಸಂಸದರು, ಶಾಸಕರು, ಮಾಜಿ ಕೇಂದ್ರ ಸಚಿವರು, ಸಚಿವರನ್ನು ಒಳಗೊಂಡ ವೀಕ್ಷಕರನ್ನು ಕಳುಹಿಸಲಾಗಿತ್ತು. ಅವರು ಜಿಲ್ಲೆಗಳಿಗೆ ಹೋಗಿ ಕನಿಷ್ಠ 7 ದಿನ ವಾಸ್ತವ್ಯ ಹೂಡಿ, ಸ್ಥಳೀಯ ನಾಯಕರು, ಸ್ವಯಂ ಸೇವಾ ಸಂಸ್ಥೆಗಳು, ಪ್ರಭಾವಿಗಳ ಜೊತೆ ಚರ್ಚೆ ಮಾಡಿ, ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ ಎಂದು ಅವರು ತಿಳಿಸಿದರು.

ಎಐಸಿಸಿಯಿಂದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ನೇಮಕದ ವಿಚಾರದಲ್ಲಿ ಕೆಲವು ಮಾನದಂಡಗಳನ್ನು ನೀಡಲಾಗಿತ್ತು. ಅದರಂತೆ, ವೀಕ್ಷಕರು ಪ್ರತಿಯೊಂದು ಜಿಲ್ಲೆಯಿಂದ 6 ಹೆಸರುಗಳನ್ನು ಶಿಫಾರಸ್ಸು ಮಾಡುವಂತೆ ತಿಳಿಸಲಾಗಿತ್ತು. ರಾಜ್ಯದಲ್ಲಿನ ಒಟ್ಟು ಜಿಲ್ಲೆಗಳಲ್ಲಿ ಶೇ.50 ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಧ್ಯಕ್ಷರನ್ನು ನೇಮಿಸಲಾಗುವುದು. ಶೇ.50ರಷ್ಟು ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷ ಸ್ಥಾನ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಮೀಸಲಿರಿಸಲಾಗುವುದು ಎಂದು ವೇಣುಗೋಪಾಲ್ ಹೇಳಿದರು.

ವೀಕ್ಷಕರು ಕೊಟ್ಟಿರುವ ಹೆಸರುಗಳ ಬಗ್ಗೆ ನಾವು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಮುಖ್ಯಮಂತ್ರಿ, ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸದಸ್ಯರ ಜೊತೆ ಚರ್ಚೆ ಮಾಡುತ್ತೇವೆ. ಆನಂತರ, ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.

ವೀಕ್ಷಕರು ಆಯಾ ಜಿಲ್ಲೆಗಳಿಂದ ಆದ್ಯತೆ ಮೇರೆಗೆ ಹೆಸರುಗಳನ್ನು ಪರಿಗಣಿಸಿ ನಮಗೆ ಸಲ್ಲಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ ಅಧ್ಯಕ್ಷರಾದ ನಂತರ ಅವರು ಪಕ್ಷ ಸಂಘಟನೆಯ ವಿಚಾರದಲ್ಲಿ ಏನೆಲ್ಲ ಕೆಲಸ ಮಾಡುತ್ತಿದ್ದಾರೆ ಎಂಬುದರ ಕುರಿತು ಮೌಲ್ಯಮಾಪನ ನಡೆಸಲಾಗುವುದು. ಇಂದಿನ ಸಭೆಯಲ್ಲಿ ಉತ್ತಮವಾಗಿ ಚರ್ಚೆಗಳನ್ನು ನಡೆಸಿದ್ದೇವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News