Bengaluru | ವಿದ್ಯಾರ್ಥಿಗಳ ಮೇಲೆ ಹಲ್ಲೆ ಖಂಡಿಸಿ ವಕೀಲರ ಪ್ರತಿಭಟನೆ
ಆರೆಸ್ಸೆಸ್ ಗೂಂಡಾಗಳ ವಿರುದ್ಧ ಕ್ರಮಕ್ಕೆ ಎಸ್.ಬಾಲನ್ ಆಗ್ರಹ
ಬೆಂಗಳೂರು : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು, ನೀಟ್ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ದಿಲ್ಲಿಯಲ್ಲಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ಯುವಜನರ ಮೇಲೆ ಪೊಲೀಸ್ ಸಮವಸ್ತ್ರದಲ್ಲಿ ಬಂದು ಲಾಠಿ ಪ್ರಹಾರ ನಡೆಸಿದ ಆರೆಸ್ಸೆಸ್, ಗೂಂಡಾಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಹಿರಿಯ ವಕೀಲ ಎಸ್.ಬಾಲನ್ ಆಗ್ರಹಿಸಿದ್ದಾರೆ.
ಶುಕ್ರವಾರ ನಗರದ ಹೈಕೋರ್ಟ್ ಮುಂಭಾಗ ‘ಡಿ.ದೇವರಾಜ ಅರಸು ಅಹಿಂದ ವಕೀಲರ ವೇದಿಕೆ’ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ 21ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಳ್ಳಲು ಕಾರಣರಾಗಿರುವ ಧರ್ಮೇಂದ್ರ ಪ್ರದಾನ್ ಅವರನ್ನು ಬಂಧಿಸಿ ತಿಹಾರ್ ಜೈಲಿಗೆ ಹಾಕಬೇಕು ಎಂದು ಒತ್ತಾಯಿಸಿದರು.
ದಿಲ್ಲಿಯಲ್ಲಿ ಆರೆಸ್ಸೆಸ್, ಭಜರಂಗ ದಳದ ರೌಡಿ, ಗೂಂಡಾಗಳಿಗೆ ಪೊಲೀಸರು ಬ್ಯಾಡ್ಜ್ ಇಲ್ಲದ ಸಮವಸ್ತ್ರವನ್ನು ಹಾಕಿಸಿ, ಲಾಠಿಗಳನ್ನು ಅವರಿಗೆ ಕೈಗೆ ನೀಡಿ, ಆ ಲಾಠಿಗಳಿಗೆ ಮೊಳೆಗಳನ್ನು ಇಟ್ಟು ಹೊಡಿದಿರುವುದು ಅತ್ಯಂತ ಕ್ರೂರವಾದದ್ದು. ಗುಜರಾತ್ ಗೋದ್ರಾ ಪಕ್ರರಣದಲ್ಲಿ ಆರೆಸ್ಸೆಸ್‍ನವರು ಪೊಲೀಸ್ ನಿಯಂತ್ರಣ ಕೊಠಡಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು. ರೈತರ ಹೋರಾಟದಲ್ಲಿಯೂ ಅದೇ ಗೂಂಡಾಗಳು ರೈತರನ್ನು ಹೊಡೆಯುತ್ತಾರೆ. ಜೆಎನ್‍ಯು ಕಾಲೇಜಿನ ಒಳಗೆ ನುಗ್ಗಿ ವಿದ್ಯಾರ್ಥಿಗಳನ್ನು ಹೊಡೆಯುತ್ತಾರೆ. ಈಗಲೂ ದಿಲ್ಲಿಯಲ್ಲಿ ಅದೇ ನಡೆಯುತ್ತಿರುವುದು ಎಂದು ಬಾಲನ್ ಆಕ್ರೋಶ ವ್ಯಕ್ತಪಡಿಸಿದರು.
ಆ ಗೂಂಡಾಗಳು ಪೊಲೀಸರ ಸಮವಸ್ತ್ರದಲ್ಲಿ ಬರುತ್ತಿದ್ದಾರೆ ಎಂದರೆ ಸಮಾಜ ಎಲ್ಲಿ ಹೋಗುತ್ತಿದೆ. 15-20 ಲಕ್ಷ ರೂ.ಗಳಿಗೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗುತ್ತಿದೆ. ಹಣ ಕೊಟ್ಟು ಬರೆಯುವನಿಗೆ ಸೀಟು ಸಿಗುತ್ತದೆ. ದಲಿತರು, ಅಲ್ಪಸಂಖ್ಯಾತರು, ಬಡವರ ಕತೆ ಏನು? ನೀಟು ಎನ್ನುವುದು ಬ್ರಾಹ್ಮಣರಿಗೆ. ಅದರಲ್ಲೂ ಸೋರಿಕೆ ಎನ್ನುವುದು ಇನ್ನೂ ಶ್ರೀಮಂತ ಬ್ರಾಹ್ಮಣರಿಗೆ. ಸಮಾಜ ಕಟ್ಟಿರುವುದೇ ತಾರತಮ್ಯದ ಮೇಲೆ. ಇಲ್ಲಿ ಅಗ್ರಹಾರವೂ ಇದೆ, ಕೇರಿನೂ ಇದೆ ಎಂದು ಅವರು ವಿವರಿಸಿದರು.
ಪ್ರತಿಭಟನೆಯಲ್ಲಿ ವಕೀಲರಾದ ಕ್ಲಿಫ್ಟನ್ ಡಿ.ರೊಝಾರಿಯೋ, ನರಸಿಂಹಮೂರ್ತಿ, ಭೀಮರಾಯ್ ಸೇರಿದಂತೆ ಹಲವರು ಭಾಗವಹಿಸಿದ್ದರು.