ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸಿದ 2026ನೇ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆ-ಸೆಟ್)ಯ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಶನಿವಾರ ಈ ಸಂಬಂಧ ಕೆಇಎ ಅಧಿಕೃತ ಎಕ್ಸ್ ನಲ್ಲಿ ಮಾಹಿತಿ ನೀಡಿರುವ ಅವರು, ಕೆ-ಸೆಟ್ ಪರೀಕ್ಷೆ ಬರೆದವರ ಪೈಕಿ ಎಲ್ಲ ಪ್ರವರ್ಗಗಳ ಅಡಿಯಲ್ಲಿ ಲಭ್ಯವಿರುವ ಒಟ್ಟು 7,204 ಸ್ಲಾಟ್‍ಗಳಿಗೆ ಎದುರಾಗಿ ಬರೋಬ್ಬರಿ 8,171 ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆ ಪಡೆದುಕೊಂಡಿದ್ದಾರೆ. ತೇರ್ಗಡೆಯಾಗಿರುವ ಅಭ್ಯರ್ಥಿಗಳಿಗೆ ಅರ್ಹತಾ ಪ್ರಮಾಣ ಪತ್ರಗಳನ್ನು ಸದ್ಯದಲ್ಲೇ ವಿತರಿಸಲಾಗುವುದು ಎಂದು ಎಚ್.ಪ್ರಸನ್ನ ಹೇಳಿದ್ದಾರೆ.

2026ರ ಅಕ್ಟೋಬರ್ 11ರಂದು ರಾಜ್ಯದ 11 ಜಿಲ್ಲೆಗಳಲ್ಲಿ 37 ವಿಷಯಗಳಿಗೆ ಕೆ-ಸೆಟ್ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಗೆ ಒಟ್ಟು 1,29,214 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 1,17,638 ಅಭ್ಯರ್ಥಿಗಳು ಪ್ರಥಮ ಮತ್ತು ದ್ವಿತೀಯ ಪತ್ರಿಕೆಗಳೆರಡಕ್ಕೂ ಹಾಜರಾಗಿದ್ದರು. ಯುಜಿಸಿ ನಿಯಮಾವಳಿ ಹಾಗೂ ರಾಜ್ಯದ ಮೀಸಲಾತಿ ನೀತಿಯನ್ವಯ ಅಭ್ಯರ್ಥಿಗಳ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗಿದೆ. ಲಭ್ಯವಿದ್ದ 7,204 ಅರ್ಹತಾ ಸ್ಲಾಟ್‍ ಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ, ಅಂದರೆ 8,171 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ಎಚ್.ಪ್ರಸನ್ನ ತಿಳಿಸಿದ್ದಾರೆ.

ಸಾಮಾನ್ಯ ವರ್ಗದ ಅಭ್ಯರ್ಥಿಗಳು ಒಟ್ಟು 300 ಅಂಕಗಳಿಗೆ ಶೇ.40ರಷ್ಟು ಅಂದರೆ 120 ಅಂಕಗಳನ್ನು ಗಳಿಸಬೇಕು. ಮೀಸಲಾತಿ ವರ್ಗದ ಅಭ್ಯರ್ಥಿಗಳು ಶೇ.35ರಷ್ಟು ಅಂದರೆ 105 ಅಂಕಗಳನ್ನು ಪಡೆಯಬೇಕು. ಆದರೆ, ಕನಿಷ್ಠ ಅರ್ಹತಾ ಅಂಕಗಳನ್ನು ಗಳಿಸಿದ ಮಾತ್ರಕ್ಕೆ ಅರ್ಹತೆ ಖಚಿತವಾಗುವುದಿಲ್ಲ. ಅಭ್ಯರ್ಥಿಗಳು ತಮ್ಮ ವಿಷಯ ಮತ್ತು ವರ್ಗಕ್ಕೆ ನಿಗದಿಪಡಿಸಿರುವ ಕಟ್‍ಆಫ್ ಅಂಕಗಳನ್ನೂ ಗಳಿಸಬೇಕಾಗುತ್ತದೆ. ಯುಜಿಸಿ ಮಾರ್ಗಸೂಚಿಯ ಪ್ರಕಾರ, ನಿಗದಿತ ಕಟ್‍ಆಫ್ ಅಂಕಗಳನ್ನು ಪಡೆದಿರುವ ಎಲ್ಲಾ ಅಭ್ಯರ್ಥಿಗಳನ್ನು ಅರ್ಹತಾ ಪಟ್ಟಿಯಲ್ಲಿ ಸೇರಿಸಬೇಕಾಗಿರುವುದರಿಂದ ಲಭ್ಯವಿರುವ ಸ್ಲಾಟ್‍ಗಳಿಗಿಂತ ಹೆಚ್ಚಿನ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ಎಚ್.ಪ್ರಸನ್ನ ಸ್ಪಷ್ಟಪಡಿಸಿದ್ದಾರೆ.

ಅರ್ಹ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ, ಸ್ವಯಂ ಘೋಷಣೆ ಹಾಗೂ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅರ್ಹತಾ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತದೆ. ಅಭ್ಯರ್ಥಿಗಳು ಫಲಿತಾಂಶ, ವಿಷಯವಾರು ಮತ್ತು ವರ್ಗವಾರು ಕಟ್‍ಆಫ್ ಅಂಕಗಳ ವಿವರಗಳನ್ನು ಕೆಇಎ ಅಧಿಕೃತ ವೆಬ್‍ಸೈಟ್‍ನಲ್ಲಿ ಪರಿಶೀಲಿಸಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಯೋಗೇಶ್ ಮಲ್ಲೂರು/ವಾರ್ತಾಭಾರತಿ

contributor

ಯೋಗೇಶ್ ಮಲ್ಲೂರು ಅವರು ವಾರ್ತಾಭಾರತಿ ದಿನಪತ್ರಿಕೆಯ ಬೆಂಗಳೂರು ಬ್ಯೂರೋದಲ್ಲಿ ವರದಿಗಾರ/ಉಪಸಂಪಾದಕ. ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಲ್ಲೂರಿನವರಾದ ಯೋಗೇಶ್, ತುಮಕೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ. ಇವರು ಹಲವು ದಿನಪತ್ರಿಕೆಗಳು ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮಗಳಲ್ಲಿ ಕ್ರೈಂ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಒಟ್ಟಾರೆ, ಪತ್ರಿಕೋದ್ಯಮ ವಲಯದಲ್ಲಿ ಬೆಂಗಳೂರು, ತುಮಕೂರಿನಲ್ಲಿ ಯೋಗೇಶ್ ಅವರಿಗೆ 7 ವರ್ಷಗಳ ಅನುಭವವಿದೆ.