ರಾಜ್ಯದ ಎಲ್ಲ ಸೌರ ವಿದ್ಯುತ್ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್ ವ್ಯವಸ್ಥೆ: ಸಚಿವ ಕೆ.ಜೆ.ಜಾರ್ಜ್
ಬೆಂಗಳೂರು: ರಾಜ್ಯದ ಎಲ್ಲ ಸೌರ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್ ವ್ಯವಸ್ಥೆ ಸ್ಥಾಪಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಶುಕ್ರವಾರ ಬಿಡದಿಯಲ್ಲಿ ಪೇಸ್ ಡಿಜಿಟೆಕ್-ಲಿನೇಜ್ ಪವರ್ ಸಂಸ್ಥೆ ಸ್ಥಾಪಿಸಿರುವ ಸ್ವಯಂ ಚಾಲಿತ 5 ಗಿಗಾವ್ಯಾಟ್ ಅವರ್ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಗಲಿನ ವೇಳೆ ಲಭ್ಯವಿರುವ ಸೌರ ವಿದ್ಯುತ್ತನ್ನು ಸಂಗ್ರಹಿಸಿ ರಾತ್ರಿ ವೇಳೆಯೂ ಬಳಸುವಂತಾಗಬೇಕು. ಈ ನಿಟ್ಟಿನಲ್ಲಿ, ಕನಿಷ್ಠ 2 ತಾಸು ಬಳಸುವಷ್ಟು ಸೌರ ವಿದ್ಯುತ್ತಿನ ಸಂಗ್ರಹಣೆಗಾಗಿ ಎಲ್ಲ ಸೌರ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಒಟ್ಟಾರೆ ವಿದ್ಯುತ್ ಉತ್ಪಾದನೆಯಲ್ಲಿ ಈ ವಲಯದ ಪಾಲು ಶೇ.65ರಷ್ಟಿದೆ. ಸೌರ ಹಾಗೂ ಪವನ ವಿದ್ಯುತ್ ಉತ್ಪಾದನೆಯ ಪ್ರಮಾಣ ಗಣನೀಯವಾಗಿ ಹೆಚ್ಚಿದ್ದು, ಅವುಗಳಿಂದ ಉತ್ಪಾದನೆಯಾಗುವ ವಿದ್ಯುತ್ತನ್ನು ಸಂಗ್ರಹಿಸಿ ಅಗತ್ಯವಿದ್ದಾಗ ಪೂರೈಸಲು ಬೇಕಾದ ಸೂಕ್ತ ಶೇಖರಣಾ ವ್ಯವಸ್ಥೆ ಮಾಡಿಕೊಳ್ಳುವುದು ಅನಿವಾರ್ಯ ಎಂದರು.
ಪವರ್ ಗ್ರಿಡ್‍ನ ಸ್ಥಿರತೆ ಕಾಯ್ದುಕೊಳ್ಳುವ ಜತೆಗೆ ಕಡಿಮೆ ಬೇಡಿಕೆಯ ಅವಧಿಯಲ್ಲಿ ಉತ್ಪಾದಿಸಲಾದ ನವೀಕರಿಸಬಹುದಾದ ಇಂಧನವನ್ನು ಸಂಗ್ರಹಿಸಿ, ಅಗತ್ಯವಿದ್ದಾಗ ಪೂರೈಸುವ ಉದ್ದೇಶದಿಂದ ಕೇಂದ್ರ ಸರಕಾರವೂ ಸ್ಟೋರೇಜ್ ಪ್ರಾಜೆಕ್ಟ್ ಗಳನ್ನು ಉತ್ತೇಜಿಸುತ್ತಿದೆ. ಈ ಕಾರ್ಯದಲ್ಲಿ ಖಾಸಗಿ ಸಂಸ್ಥೆಯವರೂ ಕೈಜೋಡಿಸಿರುವುದು ಸಂತಸದ ವಿಷಯ ಎಂದು ಹೇಳಿದರು.
ವಿದ್ಯುತ್ ಕ್ಷೇತ್ರದಲ್ಲಿ ಕರ್ನಾಟಕ ಮೊದಲಿನಿಂದಲೂ ಮುನ್ನಡೆ ಕಾಯ್ದುಕೊಂಡಿದೆ. ಏಷ್ಯಾ ಖಂಡದಲ್ಲೇ ಮೊದಲ ಜಲ ವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್‍ಗೆ ಸಲ್ಲುತ್ತದೆ. ಇದೀಗ ಶರಾವತಿಯಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆ ಆರಂಭಿಸಲಿದ್ದೇವೆ. ಕೇಂದ್ರದಿಂದಲೂ ಅನುಮತಿ ದೊರೆತಿದೆ. ನಮಗೆ ಸಹಕಾರ ನೀಡುತ್ತಿರುವ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
‘ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್ ಉತ್ಪಾದನೆಯಾದರೂ, ಸಂಗ್ರಹಣೆಗೆ ಅವಕಾಶ ಇಲ್ಲ. ಹೀಗಾಗಿ, ಶರಾವತಿ ಪಂಪ್ಡ್ ಸ್ಟೋರೇಜ್ ಮೂಲಕ 2ಸಾವಿರ ಮೆ.ವ್ಯಾ. ವಾರಾಹಿ ಪಂಪ್ಡ್ ಸ್ಟೋರೇಜ್ ಮೂಲಕ 1500 ಮೆ.ವ್ಯಾ. ಪಾವಗಡದಲ್ಲಿ 1ಸಾವಿರ ಮೆ.ವ್ಯಾ.ಸಾಮಥ್ರ್ಯ ಹಾಗೂ ರ್ಯಾಪ್ಟೆಯಲ್ಲಿ 2ಸಾವಿರ ಮೆ.ವ್ಯಾ. ಸಾಮಥ್ರ್ಯದ ಬ್ಯಾಟರಿ ಸ್ಟೋರೇಜ್ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರಕಾರ ತೀರ್ಮಾನಿಸಿದೆ ಎಂದರು.
ಸ್ಟೋರೇಜ್ ವ್ಯವಸ್ಥೆ: ಲಿನೇಜ್ ಪವರ್ ಸಂಸ್ಥೆಯ ಬ್ಯಾಟರಿ ಸ್ಟೋರೇಜ್ ಘಟಕವನ್ನು ಉದ್ಘಾಟಿಸಿದ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಇಂಧನ ಸ್ವಾವಲಂಬನೆಯತ್ತ ಸದೃಢ ಹೆಜ್ಜೆ ಹಾಕುತ್ತಿರುವ ಆತ್ಮನಿರ್ಭರ ಭಾರತಕ್ಕೆ ಬ್ಯಾಟರಿ ಸ್ಟೋರೇಜ್ ವ್ಯವಸ್ಥೆ ಅತ್ಯಗತ್ಯ ಎಂದರು.
ದೇಶದಲ್ಲಿ ಆದ ಮೊದಲ ಕ್ರಾಂತಿ ವಿದ್ಯುಚ್ಛಕ್ತಿ, ನಂತರ ಬಂದದ್ದು ಟಿವಿ. ನಮ್ಮೆಲ್ಲರ ಬದುಕನ್ನು ಬದಲಿಸಿದ್ದು ಇಂಟರ್ನೆಟ್. ಸ್ಮಾರ್ಟ್‍ಟಿವಿ ಈಗ ಬ್ಯಾಟರಿ ಸ್ಟೋರೇಜ್ ವ್ಯವಸ್ಥೆ ಮತ್ತೊಮ್ಮೆ ಅಂತಹ ಮಹತ್ವದ ಬದಲಾವಣೆ ತರಲಿದೆ. ಇಂತಹ ಬದಲಾವಣೆಗೆ ನಾವೆಲ್ಲರೂ ಸಾಕ್ಷಿ ಆಗಲಿದ್ದೇವೆ ಎಂದು ಅವರು ನುಡಿದರು.
ಕಾರ್ಯಕ್ರಮದಲ್ಲಿ ಕ್ರೆಡಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ, ಶಾಸಕ ಸಾ.ರಾ.ಮಹೇಶ್, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ, ಶ್ರೀ ಪ್ರಕಾಶನಾಥ ಸ್ವಾಮೀಜೀ, ಅವಧೂತ ವಿನಯ್ ಗೂರೂಜಿ, ಪೇಸ್ ಡಿಜಿಟೆಕ್-ಲಿನೇಜ್ ಪವರ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ವೇಣುಗೋಪಾಲ್ ರಾವ್ ಉಪಸ್ಥಿತರಿದ್ದರು.