×
Ad

ಕವಿಕಾದಲ್ಲಿ 14 ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ : ಸಚಿವ ಕೆ.ಜೆ.ಜಾರ್ಜ್

Update: 2025-06-30 18:37 IST

ಬೆಂಗಳೂರು : ಸರಕಾರಿ ಸ್ವಾಮ್ಯದ ವಿದ್ಯುತ್ ಪರಿವರ್ತಕಗಳ (ಟ್ರಾನ್ಸ್ ಫಾರ್ಮರ್) ಉತ್ಪಾದನಾ ಸಂಸ್ಥೆ ಕರ್ನಾಟಕ ವಿದ್ಯುತ್ ಕಾರ್ಖಾನೆ(ಕವಿಕಾ) ಆವರಣದಲ್ಲಿ 14 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಲಿರುವ 20 ಮೆಗಾವ್ಯಾಟ್ ಸಾಮರ್ಥ್ಯದವರೆಗಿನ ವಿದ್ಯುತ್ ಪರಿವರ್ತಕಗಳ ದುರಸ್ತಿ ಕೇಂದ್ರಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು.

ದುರಸ್ತಿ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಇಂಧನ ಸಚಿವ ಕೆ.ಜೆ.ಜಾರ್ಜ್, ಆರು ತಿಂಗಳಲ್ಲಿ ಈ ಘಟಕದ ಕಾಮಗಾರಿ ಪೂರ್ಣಗೊಳಿಸಿ ವಿದ್ಯುತ್ ಪರಿವರ್ತಕಗಳ ದುರಸ್ತಿ ಕಾರ್ಯ ಆರಂಭಿಸಲಾಗುವುದು. ಇದು ಸರಕಾರಿ ಕಾರ್ಖಾನೆಯಾಗಿರುವುದರಿಂದ ಕೆಪಿಟಿಸಿಎಲ್ ಮತ್ತು ಎಲ್ಲ ಎಸ್ಕಾಂಗಳ ವ್ಯಾಪ್ತಿಯ ಪರಿವರ್ತಕಗಳನ್ನು ಇಲ್ಲಿಯೇ ದುರಸ್ತಿ ಮಾಡಲಾಗುವುದು ಎಂದು ಹೇಳಿದರು.

ಕವಿಕಾದಲ್ಲಿ ವಾರ್ಷಿಕ 2,500 ವಿದ್ಯುತ್ ಪರಿವರ್ತಕಗಳನ್ನು ಸಿದ್ಧಪಡಿಸುವ ಸಾಮರ್ಥ್ಯವಿದೆ. ಆದರೆ, ಅಷ್ಟು ಪ್ರಮಾಣದಲ್ಲಿ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಅಗತ್ಯ ಕೆಲಸದ ಬಂಡವಾಳವನ್ನು (ವರ್ಕಿಂಗ್‌ ಕ್ಯಾಪಿಟಲ್) ಎಸ್ಕಾಂಗಳು ಮತ್ತು ಬ್ಯಾಂಕ್ ಮೂಲಕ ಒದಗಿಸಲಾಗುವುದು. ಕಾಲಮಿತಿಯಲ್ಲಿ ವಾರ್ಷಿಕ 2,500 ವಿದ್ಯುತ್ ಪರಿವರ್ತಕಗಳನ್ನು ಇಲ್ಲಿ ಉತ್ಪಾದಿಸುವುದರ ಜತೆಗೆ ಸಾಮರ್ಥ್ಯ ವನ್ನು ಇನ್ನಷ್ಟು ಹೆಚ್ಚಿಸಲು ಕ್ರಮ ವಹಿಸಲಾಗುವುದು ಎಂದು ಜಾರ್ಜ್ ತಿಳಿಸಿದರು.

ಕವಿಕಾಗೆ ಎಸ್ಕಾಗಳಿಂದ 50 ಕೋಟಿ ರೂ. ಕೆಲಸದ ಬಂಡವಾಳ ಪೂರೈಸುವಂತೆ ಸೂಚಿಸಲಾಗಿದೆ. ಬೆಸ್ಕಾಂ ವತಿಯಿಂದ 12.50 ಕೋಟಿ ರೂ. ಈಗಾಗಲೇ ಒದಗಿಸಲಾಗಿದೆ. ಉಳಿದ ಮೊತ್ತವನ್ನು ಶೀಘ್ರ ಪಾವತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಾರ್ಜ್ ಹೇಳಿದರು.

ಕವಿಕಾ ವ್ಯಸ್ಥಾಪಕ ನಿರ್ದೇಶಕ ಲೋಖಂಡೆ ಸ್ನೇಹಲ್ ಸುಧಾಕರ್ ಮಾಹಿತಿ ನೀಡಿ, ಕವಿಕಾದಲ್ಲೇ ವಿದ್ಯುತ್ ಪರಿವರ್ತಕಗಳ ದುರಸ್ತಿ ಕೇಂದ್ರ ಆರಂಭಿಸುವುದರಿಂದ ದುರಸ್ತಿ ಕೆಲಸ ತ್ವರಿತವಾಗಿ ನಡೆದು ಎಸ್ಕಾಂಗಳು ಮತ್ತು ಕೆಪಿಟಿಸಿಎಲ್ ಗಳಿಗೆ ಅನುಕೂಲವಾಗಲಿದೆ. ಭವಿಷ್ಯದಲ್ಲಿ ಈ ದುರಸ್ತಿ ಕೇಂದ್ರದಲ್ಲಿ ಪರಿವರ್ತಕಗಳ ಉತ್ಪಾದನೆಯನ್ನೂ ಮಾಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕವಿಕಾ ಅಧ್ಯಕ್ಷ ಎಚ್.ಸಿ.ಲಲಿತ್ ರಾಘವ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ್, ಕವಿಕಾ ಕಾರ್ಯನಿರ್ವಾಹಕ ನಿರ್ದೇಶಕ ನಾಗರಾಜ್ ಮತ್ತಿತರರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News