ಆರ್ಯ ಈಡಿಗ ಸಮುದಾಯದ ಎಲ್ಲ ಪಂಗಡಗಳು ಒಗ್ಗೂಡಬೇಕು : ಕೋಟ ಶ್ರೀನಿವಾಸ ಪೂಜಾರಿ
ಬೆಂಗಳೂರು : ಆರ್ಯ ಈಡಿಗ ಸಮುದಾಯದ ಎಲ್ಲ ಪಂಗಡಗಳ ಮಹಿಳೆಯರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಅವಶ್ಯಕತೆ ಇದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದ್ದಾರೆ.
ರವಿವಾರ ಇಲ್ಲಿನ ನಿಮ್ಹಾನ್ಸ್ ಸಭಾಂಗಣದಲ್ಲಿ ಆರ್ಯ ಈಡಿಗ ಮಹಿಳಾ ಸಂಘದಿಂದ ಆಯೋಜಿಸಲಾಗಿದ್ದ ‘ನಾರಿ ಶಕ್ತಿ ರಾಷ್ಟ್ರೀಯ’ ಈಡಿಗ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈಡಿಗ ಸಮುದಾಯಗಳು ಮತ್ತಷ್ಟು ಸಂಘಟಿತರಾಗಬೇಕು. ಈಡಿಗ ಸಮುದಾಯದ ಮಹಿಳೆಯರು ರಾಜಕೀಯ ಕ್ಷೇತ್ರಕ್ಕೆ ಬರುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಚಿಕ್ಕವನಿದ್ದಾಗ ನನಗೂ ನಮ್ಮೂರಿನಲ್ಲಿ ಅಸ್ಪೃಶ್ಯತೆಯ ಅನುಭವವಾಗಿತ್ತು, ನಮ್ಮೂರಿನ ಪೂಜಾರಿಯನ್ನು ನಾವು ಮುಟ್ಟಿದರೆ ಆತ ಪುನಃ ಸ್ನಾನ ಮಾಡಿಕೊಂಡು ಬರುತ್ತಿದ್ದರು. ಆದರೆ, ಬ್ರಹ್ಮಶ್ರೀ ನಾರಾಯಣ ಗುರುಗಳು ಆಸ್ಪಶ್ಯತೆಯ ವಿರುದ್ದ ಹೋರಾಟ ನಡೆಸಿದರು ಎಂದು ಸ್ಮರಿಸಿದರು.
ನಾರಾಯಣಗರುಗಳು ಹಿಂದುಳಿದ ವರ್ಗಗಳಿಗೆ ಶಿಕ್ಷಣ ನೀಡಿದರು. ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಈಡಿಗ ಸಮುದಾಯಗಳು ಮತ್ತಷ್ಟು ಸಂಘಟಿತರಾಗಬೇಕು ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಮಾತನಾಡಿ, ಈಡಿಗ ಸಮುದಾಯದ ಹೆಣ್ಣು ಮಕ್ಕಳು ಇತೀಚೆಗೆ ಶಿಕ್ಷಿತರಾಗಿ ಸಂಘಟಿತರಾಗುವುದು ಅತ್ಯಂತ ಸಂತಸ ತಂದಿದೆ. ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಈಡಿಗ ಸಮುದಾಯದ ಮಹಿಳೆಯರು ಭಾಗವಹಿಸಿ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.
ತೆಲಂಗಾಣ ಮಾಜಿ ಸಚಿವ ವಿ.ಶ್ರೀನಿವಾಸ ಗೌಡ ಮಾತನಾಡಿ, ಆಂಧಪ್ರದೇಶ, ತಮಿಳುನಾಡು, ಕೇರಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈಡಿಗ ಸಮುದಾಯದವರು ವಾಸವಾಗಿದ್ದಾರೆ. ಈಡಿಗ ಮಹಿಳೆಯರು ರಾಷ್ಟ್ರೀಯ ಮಟ್ಟದಲ್ಲಿ ಒಂದಾಗುವ ಅವಶ್ಯಕತೆ ಇದೆ ಎಂದು ಹೇಳಿದರು.
ಸಂಘದ ಅಧ್ಯಕ್ಷೆ ಡಾ.ನಳಿನಾಕ್ಷಿ ಸಣ್ಣಪ್ಪ ಮಾತನಾಡಿ, ಮಹಿಳಾ ಶಕ್ತಿಯನ್ನು ಬಲಪಡಿಸಲು ಸಮ್ಮೇಳನದ ಪ್ರಧಾನ ಉದ್ದೇಶವಾಗಿದೆ. ಸಮುದಾಯದ ಪರವಾಗಿ ವಿವಿಧ ಸರಕಾರಿ ಇಲಾಖೆಗಳಲ್ಲಿ ಮಂಡಳಿಗಳಲ್ಲಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಮರ್ಪಕ ಪ್ರಾತಿನಿಧ್ಯವನ್ನು ಪಡೆಯಲು ನಮ್ಮ ಬೇಡಿಕೆಗಳನ್ನು ಒಗ್ಗಟ್ಟಿನ ಧ್ವನಿಯಲ್ಲಿ ಮಂಡಿಸುವುದು ಈ ಸಮಾವೇಶದ ಆಶಯವಾಗಿದೆ ಎಂದರು
ನಾರಾಯಣ ಗುರುಪೀಠದ ವಿಖ್ಯಾತಾನಂದ ಸ್ವಾಮೀಜಿ, ನಿಟ್ಟೂರು ಶ್ರೀನಾರಾಯಣ ಗುರು ಮಹಾಸಂಸ್ಥಾನ ಅಧ್ಯಕ್ಷ ರೇಣುಕಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಯಿತು. ಹಿಂ.ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ನಾರಾಯಣ ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಂಜುನಾಥ ಪೂಜಾರಿ, ಆರ್ಯ ಈಡಿಗ ಸಂಘದ ಅಧ್ಯಕ್ಷ ಡಾ.ಎಂ.ತಿಮ್ಮೇಗೌಡ, ಜನತಾ ಏಜಕೇಶನ್ ಸೊಸೈಟಿಯ ಅಧ್ಯಕ್ಷೆ ಡಾ.ರಾಜನಂದಿನಿ ಕಾಗೋಡು, ಅಧ್ಯಕ್ಷೆ ಅಶಿತ ಆನಂದ್ ಹಾಜರಿದ್ದರು.