ಪದಾಧಿಕಾರಿಗಳನ್ನು ಹುದ್ದೆಯಿಂದ ಕೈಬಿಟ್ಟ ವಿಚಾರ; ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕಿತ್ತಾಟ..!
ಬೆಂಗಳೂರು : ಯುವ ಕಾಂಗ್ರೆಸ್ಸಿನ ಕೆಲ ಪದಾಧಿಕಾರಿಗಳನ್ನು ದಿಢೀರ್ ಹುದ್ದೆಯಿಂದ ಕೈಬಿಡಲಾಗಿದೆ ಎನ್ನುವ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದಲ್ಲದೆ, ಪರಸ್ಪರ ಕೈಕೈ ಮಿಲಾಯಿಸಿ ಹೊಡೆದಾಟ ಮಾಡಿಕೊಳ್ಳುವ ಹಂತಕ್ಕೆ ತಲುಪಿದ ದೃಶ್ಯ ಕಂಡಿತು.
ಸೋಮವಾರ ನಗರದ ಕ್ವೀನ್ಸ್ ರಸ್ತೆಯ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಚೇರಿಯಲ್ಲಿ ‘ನೀಟ್’ ಪರೀಕ್ಷೆ ವಿಚಾರವಾಗಿ ಪ್ರತಿಭಟನೆ ನಡೆಸಲು ಪೂರ್ವಭಾವಿ ಸಭೆಯೊಂದನ್ನು ಕೆಪಿವೈಸಿಸಿ ಅಧ್ಯಕ್ಷ ಮಂಜುನಾಥ ಗೌಡ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು. ಈ ವೇಳೆ ದೀಪಿಕಾ ರೆಡ್ಡಿ, ಬಿಂದುಗೌಡ ಸೇರಿದಂತೆ 15 ಜನರ ಅಮಾನತು ವಿಚಾರ ಗದ್ದಲಕ್ಕೆ ಕಾರಣವಾಯಿತು.
ಯಾವುದೇ ನೋಟಿಸ್ ನೀಡದೇ ಕೆಲ ಪದಾಧಿಕಾರಿಗಳನ್ನು ಹುದ್ದೆಯಿಂದ ಬಿಡುಗಡೆ ಮಾಡಿರುವ ವಿಚಾರ ಸಂಬಂಧ ಗದ್ದಲ ಎಬ್ಬಿಸಿ ಕೆಪಿವೈಸಿಸಿ ಅಧ್ಯಕ್ಷ ಮಂಜುನಾಥ ಗೌಡ, ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಗಂ ಭಂಡಾರಿಗೆ ದೀಪಿಕಾ ರೆಡ್ಡಿ ಬೆಂಬಲಿಗರು ಘೇರಾವ್ ಹಾಕಿ ತರಾಟೆಗೆ ತೆಗೆದುಕೊಂಡರು. ಈ ವೇಳೆ, ಕಾಂಗ್ರೆಸ್ ಕಾರ್ಯಕರ್ತರು ತೀವ್ರ ವಾಗ್ದಾದ ನಡೆಸಿದಲ್ಲದೆ, ಹೊಡೆದಾಟ ಮಾಡಿಕೊಳ್ಳುವ ಹಂತಕ್ಕೆ ತಲುಪಿದರು.
ಈ ಕುರಿತು ನಿಕಟಪೂರ್ವ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಮಾತನಾಡಿ, ‘ನಾನೊಬ್ಬ ಮಹಿಳೆಯಾಗಿ ಯುವ ಕಾಂಗ್ರೆಸ್ ಚುನಾವಣೆಯಲ್ಲಿ 3 ಲಕ್ಷ ಮತ ತೆಗೆದುಕೊಂಡು ಗೆದ್ದಿದ್ದೇನೆ. ನಾನು ಮಾಡಿದ ಕೆಲಸದ ಬಗ್ಗೆ ದಾಖಲೆ ಇದೆ. ಒಡೆದು ಆಳುವ ನೀತಿಯನ್ನು ಮಂಜುನಾಥ್ ಮಾಡಿದ್ದಾರೆ. ಆದರೆ, ನಮ್ಮ ಸಮಸ್ಯೆಯನ್ನು ಕೆಪಿಸಿಸಿ ಅಧ್ಯಕ್ಷರು ಬಗೆಹರಿಸುವ ವಿಶ್ವಾಸ ಇದೆ. ಪಕ್ಷಕ್ಕೆ ಒಳ್ಳೆಯದಾಗಬೇಕು ಅಷ್ಟೇ’ ಎಂದರು.
ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಪ್ರತಿಕ್ರಿಯಿಸಿ, ‘ಗಲಾಟೆ ಯಾವುದು ಆಗಿಲ್ಲ. ಆದರೆ, ಯಾರು ಗದ್ದಲ ಎಬ್ಬಿಸಿದರು ಎಂದು ಕೆಪಿಸಿಸಿ ಅಧ್ಯಕ್ಷರಿಗೆ ಹೇಳುತ್ತೇವೆ. ಯಾರ ಮೇಲೂ ದ್ವೇಷವೂ ಇಲ್ಲ. ಆಂತರಿಕ ವಿಚಾರವನ್ನು ಕುಳಿತು ಬಗೆಹರಿಸಿಕೊಳ್ಳುತ್ತೇವೆ’ ಎಂದು ಹೇಳಿದರು.