ಭಾರತ ಏಕವಚನವಲ್ಲ, ಬಹುವಚನ : ಪ್ರೊ.ಬರಗೂರು ರಾಮಚಂದ್ರಪ್ಪ
‘ಕೊರಚ ಮಾತುಕತೆ’ ಮತ್ತು ಇಂಗ್ಲಿಷ್ ಅನುವಾದವಾದ ‘ದಿ ಕೊರಚಾಸ್ ಆಫ್ ಕರ್ನಾಟಕ’ ಕೃತಿಗಳ ಲೋಕಾರ್ಪಣೆ
ಬೆಂಗಳೂರು : ಭಾರತ ಏಕ ವಚನವಲ್ಲ. ಬಹು ವಚನವಾಗಿದೆ. ಬಹು ವಚನದ ಭಾರತದ ಒಳಗಡೆ ಬಹುಭಾಷೆ, ಬಹು ಸಂಸ್ಕೃತಿಯನ್ನು ನಾವು ಕಾಣಬಹುದು ಎಂದು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.
ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನೇಗಿಲ ಯೋಗಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ‘ಕೊರಚ ಮಾತುಕತೆ’ ಮತ್ತು ಇಂಗ್ಲಿಷ್ ಅನುವಾದವಾದ ‘ದಿ ಕೊರಚಾಸ್ ಆಫ್ ಕರ್ನಾಟಕ’ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತವು ಬಹು ಭಾಷೆ, ಸಂಸ್ಕೃತಿ, ಪದ್ಧತಿ, ಆಚಾರ-ವಿಚಾರವನ್ನು ಹೊಂದಿದೆ. ಆದುದರಿಂದ ಭಾರತವು ಏಕವಚನವಲ್ಲ, ಬಹುವಚನವಾಗಿದೆ. ಇಲ್ಲಿನ ಬುಡಕಟ್ಟು, ಅಲೆಮಾರಿ ಜನರ ಆಚಾರ-ವಿಚಾರ ಹಾಗೆಯೇ ಉಳಿಯುತ್ತದೆಯೇ. ನಾಗರಿಕತೆಗೆ ತಮ್ಮನ್ನು ತೆರೆದುಕೊಳ್ಳುತ್ತಾರೆಯೇ, ಅಸ್ಮಿತೆಯನ್ನು ಉಳಿಸಿಕೊಳ್ಳುತ್ತಾರೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಜಗತ್ತಿನಲ್ಲಿ ಪ್ರಸ್ತುತ 6,703 ಭಾಷೆಗಳಿವೆ. ಆದರೆ ಅರ್ಧ ಜಗತ್ತು ಕೇವಲ 10 ಬಾಷೆಗಳನ್ನು ಮಾತ್ರ ವ್ಯವಹಾರಕ್ಕೆ ಬಳಸುತ್ತದೆ. ಈಗಾಗಲೇ 30 ಸಾವಿರ ಭಾಷೆಗಳು ನಶಿಸಿವೆ. ಬಳಸದೇ ಹೋದರೆ ಭಾಷೆ ಉಳಿಯುವುದಿಲ್ಲ, ಅಳಿಯುತ್ತಾ ಹೋಗುತ್ತದೆ ಎಂದು ಅವರು ತಿಳಿಸಿದರು.
ಕೆಲವು ಭಾಷೆಗಳನ್ನು ಆಯಾ ಸಮುದಾಯದಲ್ಲೂ ಬಳಸುತ್ತಿಲ್ಲ. ಮುಖ್ಯವಾಹಿನಿಯ ಜೀವನಕ್ಕೆ ಅತಿ ಮುಖ್ಯವಾದ ಈ ಸಣ್ಣ ಸಣ್ಣ ಸಮುದಾಯಗಳು ಪ್ರವೇಶ ಮಾಡುವ ಅನಿವಾರ್ಯವಾದ ಸಾಮಾಜಿಕ, ಆರ್ಥಿಕ ವಿಕಾಸ ನಮ್ಮಲ್ಲಿ ಉಂಟಾಗುತ್ತಿದೆ ಎಂದು ಬರಗೂರು ತಿಳಿಸಿದರು.
ನಮ್ಮಲ್ಲಿ ಊರಂಚಿನಲ್ಲಿ, ಕಾಡಂಚಿನಲ್ಲಿ, ಕಾಡಿನ ಒಳಗೆ ಜನ ಸಮುದಾಯಗಳು ವಾಸಿಸುತ್ತಿವೆ. ದೇಶದ 74,600 ಚದರ ಕಿ.ಮೀ. ಕಾಡಿನೊಳಗೆ 26 ಮಾದರಿಯ ಸಾಂಸ್ಕೃತಿಕ ವಿಶೇಷದ ಜನ ವಾಸಿಸುತ್ತಿದ್ದಾರೆ. ಇವರ ಭಾಷೆ, ಆಹಾರ ಪದ್ಧತಿ, ಸಂಸ್ಕೃತಿಯ ಬಗ್ಗೆ ನಮಗೆ ತಿಳಿದಿಲ್ಲ. 2011ರ ಜನಗಣತಿ ಪ್ರಕಾರ ಸುಮಾರು 11 ಕೋಟಿ ಜನ ಬುಡಕಟ್ಟು ಮತ್ತು ಅರೆ ಅಲೆಮಾರಿಗಳಿದ್ದಾರೆ. ದೇಶದ ಜನಸಂಖ್ಯೆಯಲ್ಲಿ ಶೇ.8.6ರಷ್ಟಿರುವ ಇವರ ಬಗ್ಗೆ ಎಷ್ಟರಮಟ್ಟಿಗೆ ನಮಗೆ ತಿಳಿದಿದೆ ಎಂದು ಪ್ರಶ್ನಿಸಿದರು.
ಕೊರಚ ಮಾತುಕತೆ ಕೃತಿಯು ಮುಖ್ಯ ವಾಹಿನಿಯ ಮೌನದ ಗಡ್ಡೆಗಳನ್ನು ಕರಗಿಸುತ್ತದೆ. ಆ ಮೂಲಕ ನಾವು ಇಲ್ಲಿದ್ದೇವೆ. ನಿಮ್ಮ ಜೊತೆ ನಮಗೆ ಬರುವ ಶಕ್ತಿ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದೆ. ಎಚ್.ಆರ್.ಸ್ವಾಮಿ ಅವರು ವಿಶೇಷ ಅಧ್ಯಯನ ನಡೆಸಿ ಈ ಕೃತಿ ಹೊರ ತಂದಿದ್ದಾರೆ. ಅನೇಕ ಮಾದರಿಗಳನ್ನು ಸೇರಿಸಿ ಸಾಂಸ್ಕೃತಿಕ ಲೋಕಕ್ಕೆ ನೀಡಿದ ಅದ್ಭುತ ಕೊಡುಗೆ ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ.ಹಂಪ ನಾಗರಾಜಯ್ಯ, ಪ್ರೊ.ಅಗ್ರಹಾರ ಕೃಷ್ಣಮೂರ್ತಿ, ರಾಷ್ಟ್ರೀಯ ಕಾನೂನು ಶಾಲೆಯ ತಳಸಮುದಾಯಗಳ ಅಧ್ಯಯನ ಕೇಂದ್ರ ಪ್ರಾಧ್ಯಾಪಕ ಡಾ.ಆರ್.ವಿ. ಚಂದ್ರಶೇಖರ್, ಲೇಖಕ ಡಾ.ಎಚ್.ಆರ್.ಸ್ವಾಮಿ, ತುಮಕೂರು ವಿವಿಯ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಬಸವರಾಜು ಜಿ. ಮತ್ತಿತರರು ಉಪಸ್ಥಿತರಿದ್ದರು.
‘ಕೊರಚ ಮಾತುಕತೆ’ ಕೃತಿಯು ಕನ್ನಡ ಸಾಂಸ್ಕೃತಿಕ ಲೋಕ ಅಷ್ಟೇ ಅಲ್ಲದೇ ಸಾಮಾಜಿಕ ಲೋಕಕ್ಕೆ ಕೊಟ್ಟ ದೊಡ್ಡ ಕೊಡುಗೆಯಾಗಿದೆ. ಇದೊಂದು ಅಸ್ಮಿತೆಯ ಹುಡುಕಾಟವಾಗಿದೆ. ಸಣ್ಣ ಸಣ್ಣ ಸಮುದಾಯಗಳು ಸಂಖ್ಯೆಯಿಂದ ಸಣ್ಣವು ಆದರೆ ಸಾಂಸ್ಕೃತಿಕವಾಗಿ ಬಹಳ ಮಹತ್ವದಿಂದ ಕೂಡಿವೆ.
-ಪ್ರೊ.ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ