ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ : ಬಿ.ವೈ.ವಿಜಯೇಂದ್ರ
ಬೆಂಗಳೂರು : ‘ರಾಜ್ಯ ಸರಕಾರ ಮೂರು ವರ್ಷದ ಆಡಳಿತ ಅವಧಿಯಲ್ಲಿ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ನಿರುದ್ಯೋಗ ಭಾಗ್ಯ ಕಲ್ಪಿಸಿದ್ದೇ ಸಾಧನೆಯೇ?. ಉತ್ಪನ್ನ ಕ್ಷೇತ್ರ ಉತ್ತೇಜಿಸದೇ ಅಭಿವೃದ್ಧಿ ಶೂನ್ಯಗೊಳಿಸಿದ್ದು ನಿಮ್ಮ ಸಾಧನೆಯೇ?. ರೈತ ಕಲ್ಯಾಣಕ್ಕಾಗಿ ಯಾವುದೇ ಯೋಜನೆ ರೂಪಿಸದೆ ರೈತ ಹೋರಾಟಗಳನ್ನು ಹತ್ತಿಕ್ಕಿದ್ದು ನಿಮ್ಮ ಸಾಧನೆಯೇ?. ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಸಂಘಟಿಸುತ್ತಿದೆ?’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಪ್ರಶ್ನಿಸಿದ್ದಾರೆ.
ಸೋಮವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಮಹಿಳಾ ಕಲ್ಯಾಣಕ್ಕಾಗಿ ಯಾವುದೇ ಕಾರ್ಯಕ್ರಮವನ್ನೂ ಕೊಡಲಿಲ್ಲ, ಗೃಹಲಕ್ಷ್ಮೀ ಯೋಜನೆಯನ್ನೂ ಸಕಾಲದಲ್ಲಿ ತಲುಪಿಸುತ್ತಿಲ್ಲ, ಮಹಿಳೆಯರ ಮೇಲಿನ ದೌರ್ಜನ್ಯ, ನಿರಂತರ ಅತ್ಯಾಚಾರಗಳು ನಿಮ್ಮ ಸರಕಾರದಲ್ಲಿ ಸ್ತ್ರೀ ಕುಲವನ್ನು ಕಾಡಿದ ದೌರ್ಭಾಗ್ಯಕ್ಕಾಗಿ ನಿಮ್ಮ ಸಮಾವೇಶವೇ?. ಸೂರುರಹಿತ ಜನರಿಗಾಗಿ ನಿವೇಶನ ಹಂಚಲಿಲ್ಲ, ಮನೆಗಳನ್ನು ವಿತರಿಸಲಿಲ್ಲ, ಮೈಸೂರು ಮುಡಾದಲ್ಲಿ ಸಾವಿರಾರು ನಿವೇಶನಗಳ ಲೂಟಿಕೋರತನದ ಸಾರಥ್ಯ ವಹಿಸಿದ್ದು ಸಾಧನೆಯೇ?’ ಎಂದು ಟೀಕಿಸಿದ್ದಾರೆ.
ಶಾಂತಿ-ಸುವ್ಯವಸ್ಥೆಗೆ ಹೆಸರಾದ ರಾಜ್ಯದಲ್ಲಿ ಕೋಮುವಾದಿ ಅಲ್ಪಸಂಖ್ಯಾತರನ್ನು ಓಲೈಸುತ್ತಿರುವುದು, ಕೋಮು ದೌಜ್ರ್ಯನ್ಯಕ್ಕೆ ದಾರಿ ಮಾಡಿಕೊಡುತ್ತಿರುವುದು ನಿಮ್ಮ ಘನಂದಾರಿ ಸಾಧನೆಯೇ?. ಗಾಂಧಿ, ಬಸವಾದಿಗಳ ಚಿಂತನೆ-ಆಶಯಗಳನ್ನು ಮೂಲೆಗುಂಪು ಮಾಡಿ 500 ಮೀಟರ್‍ಗೊಂದು ಮದ್ಯದಂಗಡಿ ತೆರೆದು ಕರ್ನಾಟಕವನ್ನು ಕುಡುಕರ ರಾಜ್ಯವನ್ನಾಗಿಸಿದ್ದು ನಿಮ್ಮ ಸಾಧನೆಯೇ?’ ಎಂದು ಅವರು ಲೇವಡಿ ಮಾಡಿದ್ದಾರೆ.
ಶಿಕ್ಷಣ ಸೌಭಾಗ್ಯ ಕಲ್ಪಿಸಿ ಭವಿಷ್ಯತ್ತಿನ ಮಕ್ಕಳನ್ನು ದೇಶದ ಅತ್ಯುತ್ತಮ ಮಾನವ ಸಂಪನ್ಮೂಲವನ್ನಾಗಿಸಲು ಸಂಕಲ್ಪ ತೊಡಬೇಕಾದ ನಿಮ್ಮ ಸರಕಾರ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಯನ್ನೂ ತರಲಿಲ್ಲ, ಶಾಲೆಗಳನ್ನಂತೂ ತೆರೆಯಲೇ ಇಲ್ಲ, ದುಸ್ಥಿತಿಯಲ್ಲಿರುವ ಶಾಲೆಗಳಿಗೆ ಕಾಯಕಲ್ಪ ನೀಡುವ ಕಾರ್ಯಕ್ಕೆ ಮುಂದಾಗಲಿಲ್ಲ, ಜ್ಞಾನಗಂಗೆ ಹರಿಯಬೇಕಾದ ಶಿಕ್ಷಣ ಕ್ಷೇತ್ರದಲ್ಲಿ ಹಿಜಾಬ್ ತೊಡಲು ಅವಕಾಶ ಮಾಡಿಕೊಟ್ಟು ಮತೀಯ ವಿಷ ಬೆರೆಸಲು ಹೊರಟಿರುವುದು ನಿಮ್ಮ ಸರಕಾರದ ಶಿಕ್ಷಣ ಸಾಧನೆಯೇ? ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಸರಕಾರದ ಪಾವತಿಯನ್ನು ನಂಬಿ ಗುತ್ತಿಗೆ ಪೂರೈಸಿದ ಗುತ್ತಿಗೆದಾರರ ಕತ್ತು ಹಿಸುಕಲು ಕಮೀಷನ್ ಮುಷ್ಠಿಯನ್ನು ಬಳಸಿ, ಗುತ್ತಿಗೆದಾರರ ಬದುಕನ್ನು ಹಿಂಡಿ ಅವರನ್ನು ಹೀನಾಯ ಸ್ಥಿತಿಗೆ ತಳ್ಳಿ, ಪರ್ಸಂಟೇಜ್ ಸರಕಾರ ಎಂದು ಕರೆಸಿಕೊಂಡಿದ್ದು ನಿಮ್ಮ ಸರಕಾರದ ಕಮಿಷನ್ ಸಾಧನೆಯೇ?. ಡಾ.ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿ, ಪ್ರಜಾಪ್ರಭುತ್ವ ವ್ಯವಸ್ತೆಯ ನಂಬಿಕೆಗೆ ದ್ರೋಹ ಬಗೆದು, ತಳಮಟ್ಟದಿಂದ ಉನ್ನತ ಮಟ್ಟದವರೆಗೆ ತಾಂಡವವಾಡುತ್ತಿರುವ ಭ್ರಷ್ಟಾ ಚಾರ, ಲೂಟಿಕೋರತನ, ಕಮೀಷನ್ ದಂಧೆ, ವಿಪರೀತ ಬೆಲೆ ಏರಿಕೆಯ ಬಿಸಿ ಸರಕಾರದ ಕುಖ್ಯಾತಿ ಸಾಧನೆಯ ಕಿರೀಟಕ್ಕೆ ತಗುಲಿಸೊಂಡು ಸಂಘಟಿಸುತ್ತಿರುವ ನಿಮ್ಮ ಸಮಾವೇಶ ಸಾಧನೆಯದ್ದಲ್ಲ, ಭಂಡತನದ ಪರಾಕಾಷ್ಠೆ ಯ ಪ್ರದರ್ಶನ ಎಂದು ಅವರು ವ್ಯಂಗ್ಯವಾಡಿದ್ದಾರೆ.
ರಾಜ್ಯದ @INCKarnataka ಸರ್ಕಾರ ಯಾವ ಪುರುಷಾರ್ಥಕ್ಕೆ ಮೂರು ವರ್ಷದ ಸಾಧನಾ ಸಮಾವೇಶ ಸಂಘಟಿಸುತ್ತಿದೆ?
— Vijayendra Yediyurappa (@BYVijayendra) May 18, 2026
ನಿಮ್ಮ ಮೂರು ವರ್ಷದ ಆಡಳಿತ ಅವಧಿಯಲ್ಲಿ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ನಿರುದ್ಯೋಗ ಭಾಗ್ಯ ಕಲ್ಪಿಸಿದ್ದೇ ನಿಮ್ಮ ಸಾಧನೆಯೇ?
ಉತ್ಪನ್ನ ಕ್ಷೇತ್ರವನ್ನು ಉತ್ತೇಜಿಸದೇ ಅಭಿವೃದ್ಧಿಯನ್ನು ಶೂನ್ಯಗೊಳಿಸಿದ್ದು ನಿಮ್ಮ ಸಾಧನೆಯೇ?
ರೈತ…
‘ನೀವು ಘೋಷಿಸಿರುವ ಸಾಧನೆಗಳೆಲ್ಲವೂ ಕಾಗದದ ಮೇಲಷ್ಟೇ ಜಾಹಿರಾತಿನ ಫಲಕಗಳ ಮೇಲಷ್ಟೇ ಕಾಣುತ್ತಿದೆ. ನಿಮ್ಮಿಂದ ನಿರೀಕ್ಷೆಯನ್ನಿಟ್ಟು ಮತ ನೀಡಿದ ಕರ್ನಾಟಕದ ಜನತೆ ಈಗಾಗಲೇ ಹತಾಶೆಗೊಂಡು ನಿಮ್ಮ ಆಡಳಿತದ ವಿರುದ್ಧ ಆಕ್ರೋಶ ಭರಿತರಾಗಿದ್ದಾರೆ. ನಿಮ್ಮ ಸರಕಾರದ ಭರವಸೆಗಳೆಲ್ಲ ‘ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎಂಬ ಅಸಲೀ ಸತ್ಯ ಅರಿತುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನಿಮ್ಮ ವೈಫಲ್ಯದ ಆಡಳಿತಕ್ಕೆ ಕಪಾಳಮೋಕ್ಷ ಮಾಡಲು ಕಾದು ಕುಳಿತಿದ್ದಾರೆ’
-ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ