ಕೆಪಿಎಸ್‌ಸಿ ನೇಮಕಾತಿ ಅಕ್ರಮ: ಇಂದು ಎಸ್‌ಐಟಿ ಮೊದಲ ಸಭೆ
ಬೆಂಗಳೂರು: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿರುವ ಆರೋಪಿತ ಅಕ್ರಮಗಳ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು ತನ್ನ ಮೊದಲ ಸಭೆ ನಡೆಸಲಿದೆ.
ರಾಜ್ಯ ಡಿಜಿಪಿ ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಎಸ್‌ಐಟಿ ತಂಡದ ಎಲ್ಲಾ ಅಧಿಕಾರಿಗಳು ಭಾಗವಹಿಸಲಿದ್ದಾರೆ. ನಿನ್ನೆಯಷ್ಟೇ ಕರ್ನಾಟಕ ಹೈಕೋರ್ಟ್ ಈ ಪ್ರಕರಣದ ತನಿಖೆಗೆ ಅಲೋಕ್ ಕುಮಾರ್ ನೇತೃತ್ವದಲ್ಲಿ ಎಸ್‌ಐಟಿ ರಚಿಸುವಂತೆ ಆದೇಶಿಸಿತ್ತು.
ಎಸ್‌ಐಟಿ ತಂಡದಲ್ಲಿ ಐಪಿಎಸ್ ಅಧಿಕಾರಿಗಳಾದ ದಿವ್ಯ ಗೋಪಿನಾಥ್, ಕುಶಾಲ್ ಚೋಕ್ಷಿ, ಅನೂಪ್ ಶೆಟ್ಟಿ ಹಾಗೂ ಕ್ಷಮಾ ಮಿಶ್ರಾ ಸದಸ್ಯರಾಗಿದ್ದಾರೆ.
ಇಂದಿನ ಸಭೆಯಲ್ಲಿ ತನಿಖೆಯ ರೂಪುರೇಷೆ, ಮುಂದಿನ ಕಾರ್ಯಯೋಜನೆ ಹಾಗೂ ಅಗತ್ಯ ಸಿಬ್ಬಂದಿಯ ನೇಮಕಾತಿ ಕುರಿತು ಚರ್ಚೆ ನಡೆಯಲಿದೆ. ಸಭೆಯ ಬಳಿಕ ಎಸ್‌ಐಟಿ ಮುಖ್ಯಸ್ಥ ಅಲೋಕ್ ಕುಮಾರ್ ಪ್ರಕರಣವನ್ನು ಎಸ್‌ಐಟಿಗೆ ವರ್ಗಾಯಿಸುವಂತೆ ಸಿಐಡಿಗೆ ಅಧಿಕೃತ ಪತ್ರ ಬರೆಯಲಿದ್ದಾರೆ ಎಂದು ತಿಳಿದುಬಂದಿದೆ.