ಬೆಂಗಳೂರು : ಕಸ್ತೂರಿ ರಂಗನ್ ವರದಿಯನ್ನು ಕರ್ನಾಟಕ ರಾಜ್ಯವು ತಿರಸ್ಕರಿಸಿಕೊಂಡು ಬಂದಿರುವುದರ ನಡುವೆಯೂ ಕೇಂದ್ರ ಸರಕಾರವು ಕರಡುಅಧಿಸೂಚನೆಗಳನ್ನು ಹೊರಡಿಸುತ್ತಿರುವುದರಿಂದ ಈ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ಅಗತ್ಯವಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಿಳಿಸಿದರು.

ಸೋಮವಾರ ಪರಿಷತ್ತಿನ ವಿಶೇಷ ಅಧಿವೇಶನದಲ್ಲಿ ಈ ವರದಿಯ ಸರಕಾರದ ಟಿಪ್ಪಣಿ ಮಂಡಿಸಿ, ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವೆಲ್ಲರೂ ಏಕ ಕಾಲಕ್ಕೆ ಪರಿಸರವನ್ನು ಉಳಿಸುವ ಮೂಲಕ ಪಶ್ಚಿಮ ಘಟ್ಟಗಳಲ್ಲಿ ವಾಸಿಸುತ್ತಿರುವ ಜನರು ಹಾಗೂ ಭವಿಷ್ಯದ ಪೀಳಿಗೆಗಳ ಹಿತರಕ್ಷಣೆಯನ್ನೂ ಮಾಡಬೇಕಿದೆ ಎಂದರು.

ಪಶ್ಚಿಮ ಘಟ್ಟಗಳು, ಪೂರ್ವ ಘಟ್ಟಗಳು, ಅರಾವಳಿ, ವಿಂಧ್ಯ ಮತ್ತು ಹಿಮಾಲಯ ಮುಂತಾದ ಪರ್ವತ ಶ್ರೇಣಿಗಳ ಉಳಿವು ನಮ್ಮ ಉಳಿವೂ ಆಗಿದೆ. ಅದರ ಜೊತೆಯಲ್ಲಿಯೇ ಅಲ್ಲಿ ತಲೆ ತಲೆಮಾರುಗಳಿಂದ ವಾಸಿಸುತ್ತಿರುವ ಜನರ ಬದುಕಿನ ರಕ್ಷಣೆಯೂ ಆಗಬೇಕಾಗಿದೆ. ಪರಿಸರ ಉಳಿದರೆ ಮಾತ್ರ ಅಲ್ಲಿನ ಜನರ ಬದುಕೂ ಉಳಿಯುತ್ತದೆ. ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನಾವು ಮುಂದಕ್ಕೆ ಸಾಗಬೇಕಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಸದನವೂ ಚರ್ಚೆ ನಡೆಸಿ ಸಲಹೆಗಳನ್ನು ನೀಡಿದಲ್ಲಿ ಮುಂದಿನ ನಿರ್ಣಯಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಡಿಸಿಎಂ ಮನವಿ ಮಾಡಿದರು.

ಕಸ್ತೂರಿ ರಂಗನ್ ವರದಿಯ ಸಾಧಕಬಾಧಕಗಳ ಚರ್ಚಿಸಿ, ವಸ್ತುನಿಷ್ಠ ನಿಲುವು ತೆಗೆದುಕೊಳ್ಳಬೇಕಾದ ಅಗತ್ಯವನ್ನು ಸದನಕ್ಕೆ ಮನವರಿಕೆ ಮಾಡಿಕೊಟ್ಟ ಡಿಸಿಎಂ ಜಿ.ಪರಮೇಶ್ವರ್, ಈ ವರದಿಯನ್ನು ಒಪ್ಪುವುದಿಲ್ಲ ಎಂಬ ನಿಲುವನ್ನು ರಾಜ್ಯ ಸರಕಾರ ಈಗಾಗಲೇ ಹಲವು ಬಾರಿ ಕೇಂದ್ರ ಸರಕಾರಕ್ಕೆ ಪತ್ರಗಳ ಮೂಲಕ ತಿಳಿಸಿದೆ. ಕೇಂದ್ರವು ಪದೇ ಪದೇ ಅಧಿಸೂಚನೆಗಳನ್ನು ಹೊರಡಿಸುತ್ತಿದ್ದು, ಇದೀಗ ಹೊರಡಿಸಿರುವ ಕರಡು ಅಧಿಸೂಚನೆಗೂ ರಾಜ್ಯ ಸರಕಾರದ ವಿರೋಧವಿದೆ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಪ್ರತಿಪಕ್ಷಗಳ ನಿಲುವನ್ನು ಪ್ರಶ್ನಿಸಿದ ಜಿ.ಪರಮೇಶ್ವರ್, ವಿಪಕ್ಷಗಳು ಕಸ್ತೂರಿರಂಗನ್ ವರದಿಯ ಪರವೋ ಅಥವಾ ವಿರೋಧವೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಪ್ರತಿಪಕ್ಷಗಳು ತಮ್ಮ ನಿಲುವನ್ನು ಹೇಳದಿದ್ದರೆ, ಜನರಿಗೆ ಅವರು ವರದಿಯ ಪರವಾಗಿದ್ದಾರೆ ಎಂಬ ಸಂದೇಶ ಹೋಗಬೇಕಾಗುತ್ತದೆ ಎಂದು ಪರಮೇಶ್ವರ್ ತಿಳಿಸಿದರು.

ಆಗ ವಿಪಕ್ಷ ಸದಸ್ಯರು ಕಸ್ತೂರಿರಂಗನ್ ವರದಿಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ಬಿಜೆಪಿ ಸದಸ್ಯ ಸಿ.ಟಿ.ರವಿ ಪ್ರತಿಕ್ರಿಯಿಸಿ, ಕಸ್ತೂರಿರಂಗನ್ ವರದಿ ಹಾಗೂ ಅದರ ಹಿನ್ನೆಲೆಯ ಕುರಿತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಕ್ಸಮರವೂ ನಡೆಯಿತು.

 

ಅವರಿಗೆ ಇನ್ನೂ ಹೆಚ್ಚಿನ ಕಾಲಾವಕಾಶ ನೀಡಬೇಕು :

ಕಸ್ತೂರಿ ರಂಗನ್ ವರದಿ ಕುರಿತು ಬಿಜೆಪಿ ಸದಸ್ಯ ಸಿ.ಟಿ.ರವಿ ಸುಮಾರು 35 ನಿಮಿಷ ಮಾತನಾಡಿದರು. ಸಭಾಪತಿ ಸಲೀಂ ಅಹ್ಮದ್ ಅವರು ಬೇರೆಯವರಿಗೆ ಅವಕಾಶ ಕೊಡಿ ಎಂದು ಸಿ.ಟಿ.ರವಿ ಅವರಿಗೆ ಸೂಚಿಸಿದರು.

ಆಗ ಆಹಾರ ಸಚಿವ ರಿಝ್ವಾನ್ ಅರ್ಷದ್ ಎದ್ದುನಿಂತು, ‘ಸಭಾಪತಿ ಅವರೇ, ಸದಾ ಹೊಡಿಯಿರಿ, ಕಡಿಯಿರಿ, ಬಡಿಯಿರಿ ಎಂದು ಆಕ್ರಮಣಕಾರಿಯಾಗಿ ಮಾತನಾಡುವ ಸಿ.ಟಿ.ರವಿ ಅವರು ಈಗ ವಿಷಯದ ಕುರಿತಾಗಿ ಉತ್ತಮವಾಗಿ ಮಾತನಾಡುತ್ತಿದ್ದಾರೆ. ಮೌಲ್ಯಯುತವಾದ ಅಂಶಗಳನ್ನು ಸದನದ ಗಮನಕ್ಕೆ ತಂದಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದರು.

ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಚಿವರೇ ಅವರು ಅದನ್ನೆಲ್ಲಾ ಈಗ ಬಿಟ್ಟಿದ್ದಾರೆ, ಮರೆತಿದ್ದಾರೆ. ಅದನ್ನೆಲ್ಲಾ ನೆನಪಿಸಬೇಡಿ. ಮತ್ತೆ ಅಲ್ಲಿಗೇ ಮರಳಿದರೆ ಕಷ್ಟ ಎಂದು ಕಾಲೆಳೆದರು.

ಆಗ ಕಕ್ಕಾಬಿಕ್ಕಿಯಾದ ಸಿ.ಟಿ.ರವಿ, ನಾರಾಯಣಸ್ವಾಮಿ ಅವರೇ, ನಾನು ಯಾವತ್ತೂ ಹೊಡಿ, ಬಡಿ, ಕಡಿ ಮಾಡಿಲ್ಲ. ಯಾರನ್ನೂ ಕಡಿದಿಲ್ಲ ಎಂದರು. ಅವರ ಮಾತಿಗೆ ಸದನದಲ್ಲಿ ನಗೆಯಲೆ ಎದ್ದಿತು. ಮತ್ತೆ ಸಿ.ಟಿ.ರವಿ ಅವರು, ನಾನು ಕಡಿಯುವ ಧರ್ಮದಲ್ಲಿ ಹುಟ್ಟಿಲ್ಲ. ದಯೆಯೇ ಧರ್ಮದ ಮೂಲವಯ್ಯ ಎಂದು ಹೇಳಿದ ಧರ್ಮದಲ್ಲಿ ಹುಟ್ಟಿದ್ದೇನೆ. ಕಡಿಯುವವರಿಗೆ ಚುಚ್ಚುವಂತಹ ಮಾತುಗಳನ್ನಾಡಿದ್ದೇನೆ ಅಷ್ಟೇ. ಯಾರಿಗೂ ನಾನು ಚುಚ್ಚಿಲ್ಲ ಎಂದು ಸಮರ್ಥಿಸಿಕೊಂಡರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor