ಬೆಂಗಳೂರು : ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ರಾಜ್ಯಗಳ ಸಲಹೆ ಪರಿಶೀಲಿಸಲು ನೇಮಕವಾದ ಸಂಜಯ ಕುಮಾರ್ ಸಮಿತಿ, ಪಶ್ಚಿಮಘಟ್ಟದ ಬಾಧಿತ ಗ್ರಾಮಗಳಿಗೆ ಭೇಟಿ ನೀಡಿ ಜನರ ಅಭಿಪ್ರಾಯವನ್ನೆ ಪಡೆಯಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ನಡೆದ ಕಸ್ತೂರಿ ರಂಗನ್ ವರದಿ ಕುರಿತ ಚರ್ಚೆಯ ವೇಳೆ ಮಾತನಾಡಿದ ಅವರು, ನಿವೃತ್ತ ಅರಣ್ಯಾಧಿಕಾರಿ ಸಂಜಯ್ ಕುಮಾರ್ ಅರಣ್ಯ ಸಚಿವನಾಗಿದ್ದಾಗ ನನ್ನ ಭೇಟಿ ಮಾಡಿದ್ದರು. ನಾನು ಗ್ರಾಮ ಪಂಚಾಯತಿಗಳಿಗೆ ಹೋಗಿ, ಜನವಸತಿ ಪ್ರದೇಶಕ್ಕೆ ಭೇಟಿ ನೀಡಿ ಅಭಿಪ್ರಾಯ ಪಡೆಯಲು ಸಲಹೆ ನೀಡಿದ್ದೆ. ಆದರೆ ಅವರು ತಮ್ಮ ಕರ್ತವ್ಯ ಮಾಡಲಿಲ್ಲ ಎಂದರು.

ಯಾವುದೇ ರಾಜಕೀಯ ಬೆರೆಸದೆ, ಪರಿಸರ ಪ್ರಕೃತಿ ಸಂರಕ್ಷಿಸಬೇಕು. ನೇಪಾಳದ ದುರಂತ ನಮ್ಮ ಕಣ್ಣಮುಂದಿದೆ. ಜಾಗತಿಕ ತಾಪಮಾನ ಏರುತ್ತಿದೆ. ಇದನ್ನೂ ಗಮನಹರಿಸಬೇಕು. ಕೇಂದ್ರ ಅಧಿಸೂಚನೆ ಹೊರಡಿಸಿದ್ದು, ಅದಕ್ಕೂ ಉತ್ತರ ದಾಯಿತ್ವ ಇದೆ. ಹೀಗಾಗಿ ಆ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಪರಿಹರಿಸಬೇಕು ಎಂದರು.

ಅರಣ್ಯ ಇಲಾಖೆಯ ಅಧಿಕಾರಿಗಳನ್ನು ದೂಷಿಸುವುದರಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ. ಅರಣ್ಯ ಸಂರಕ್ಷಣೆಗೆ ರಾಜ್ಯದ ಕಾಯ್ದೆ ಮತ್ತು ಕೇಂದ್ರದ ಕಾಯ್ದೆ ಇದೆ. ಅದನ್ನು ಪಾಲಿಸಬೇಕಾಗುತ್ತದೆ. ಇಲ್ಲವೇ ಕೇಂದ್ರ ಮತ್ತು ರಾಜ್ಯ ಸರಕಾರ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ ಎಂದ ಅವರು, ಒಂದೊಮ್ಮೆ ನ್ಯಾಯಲಯದ ಆದೇಶದಂತೆ ಈ ಅಧಿಸೂಚನೆಯನ್ನೇ ಅಂತಿಮಗೊಳಿಸಿದರೆ ಕಷ್ಟವಾಗುತ್ತದೆ. ಹೀಗಾಗಿ ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗುವ ಬಗ್ಗೆ ಹಾಗೂ ಒಮ್ಮತದಿಂದ ಶಾಶ್ವತ ಪರಿಹಾರ ಕಂಡುಕೊಳ್ಳಲು ಈ ಸದನ ನಿರ್ಣಯಿಸಬೇಕಾಗುತ್ತದೆ ಎಂದು ಸಚಿವರು ಹೇಳಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor