×
Ad

ಭೂಸ್ವಾಧೀನ ಪ್ರಕ್ರಿಯೆಗಳಲ್ಲಿ ದಕ್ಷತೆ ತರಲು ʼಏಕೀಕೃತ ಭೂಸ್ವಾಧೀನ ವ್ಯವಸ್ಥೆʼಗೆ ಸಚಿವ ಕೃಷ್ಣಭೈರೇಗೌಡ ಚಾಲನೆ

Update: 2025-09-29 22:40 IST

ಬೆಂಗಳೂರು, ಸೆ.29: ರಾಜ್ಯಾದ್ಯಂತ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ನ್ಯಾಯಸಮ್ಮತೆಯನ್ನು ತರುವ ನಿಟ್ಟಿನಲ್ಲಿ ನಮ್ಮ ಸರಕಾರವು ಏಕೀಕೃತ ಭೂಸ್ವಾಧೀನ ವ್ಯವಸ್ಥೆ(ಯುಎಲ್‍ಎಂಎಸ್) ಮಾಡ್ಯೂಲ್ ಅನ್ನು ಹೊರತಂದಿದೆ. ಈ ವ್ಯವಸ್ಥೆಯು, ರಾಜ್ಯಾದ್ಯಂತ ಭೂಸ್ವಾಧೀನ ಪ್ರಕ್ರಿಯೆಯನ್ನು ಸಮನ್ವಯಗೊಳಿಸಲು ಮತ್ತು ಪ್ರಸ್ತುತ ಕೈಗೊಳ್ಳಲಾಗುತ್ತಿರುವ ಭೂಸ್ವಾಧೀನ ಪ್ರಕ್ರಿಯೆಗಳು ಮತ್ತು ಹಿಂದಿನ ಭೂಸ್ವಾಧೀನ ಪ್ರಕರಣಗಳಲ್ಲಿನ ಮೊಕದ್ದಮೆಗಳನ್ನು ಗುರುತಿಸುವ ಏಕೀಕೃತ ಡಿಜಿಟಲ್ ವೇದಿಕೆಯಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆನ್‍ಲೈನ್ ವ್ಯವಸ್ಥೆಗೆ ಚಾಲನೆ ನೀಡಿ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಾಡ್ಯೂಲ್ ಅನ್ನು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು, ಎಎಲ್‍ಒಗಳು ಮತ್ತು ಕ್ಷೇತ್ರ ಅಧಿಕಾರಿಗಳಿಂದ ರಚಿಸಲ್ಪಟ್ಟ ತಜ್ಞರ ಸಮಿತಿಯ ಮಾರ್ಗದರ್ಶನ ಮತ್ತು ಪರಿಶೀಲನೆಯಡಿಯಲ್ಲಿ, ಇ-ಆಡಳಿತ ವಿಭಾಗದ ಸೆಂಟರ್ ಫಾರ್ ಸ್ಮಾರ್ಟ್ ಗವರ್ನನ್ಸ್‌ ನ ಏಕೀಕೃತ ಭೂ-ನಿರ್ವಹಣಾ ವ್ಯವಸ್ಥೆ (ಯುಎಲ್‍ಎಂಎಸ್)ಯ ವತಿಯಿಂದ ಅಭಿವೃದ್ಧಿಪಡಿಸಲಾಗಿದೆ ಎಂದರು.

ಈ ಮಾಡ್ಯೂಲ್ ಎಲ್ಲಾ ಭೂಸ್ವಾಧೀನಪಡಿಸುವ ಇಲಾಖೆಗಳು- ಕಂದಾಯ, ಜಲಸಂಪನ್ಮೂಲ, ನಗರಾಭಿವೃದ್ಧಿ, ಮೂಲಸೌಲಭ್ಯ ಅಭಿವೃದ್ಧಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗೃಹ ಮಂಡಳಿ, ಲೋಕೋಪಯೋಗಿ ಇಲಾಖೆ, ಕೆಶಿಪ್, ಕೆ-ರೈಡ್, ಮೆಟ್ರೋ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮುಂತಾದ ಇಲಾಖೆಗಳು ಭೂಸ್ವಾಧೀನ ಪ್ರಕ್ರಿಯೆಯ ವಿವಿಧ ಇಲಾಖೆಗಳೊಂದಿಗೆ ಕೊಂಡಿಯಾಗಿ ಸಂಪೂರ್ಣ ವಿವರಗಳನ್ನು ನಮೂದಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯೋಚಿತ ಪರಿಹಾರ, ಪುನರ್‌ ವಸತಿ ಮತ್ತು ಪುನರ್‌ ವ್ಯವಸ್ಥೆ ಹಕ್ಕು ಅಧಿನಿಯಮ 2013ರ ಕಾಯ್ದೆಗೆ ಅನುಗುಣವಾಗಿ ಹೊಸ ಪುಸ್ತಾವನೆಗಳಿಗೆ ಪ್ರಕ್ರಿಯೆ ಆಧಾರಿತ ಕಾರ್ಯ ಹರಿವನ್ನು ಒದಗಿಸಲು ಈ ಭೂಸ್ವಾಧೀನ ವ್ಯವಸ್ಥೆಯನ್ನು ಇಮ್ಮಡಿಗೊಳಿಸಲಾಗಿದೆ. ಪ್ರಸ್ತಾವನೆ ಸಲ್ಲಿಕೆಯಿಂದ ಹಿಡಿದು ಪರಿಹಾರ ವಿತರಣೆ ಮತ್ತು ಪುನರ್ವಸತಿವರೆಗಿನ ಭೂಸ್ವಾಧೀನದ ಸಂಪೂರ್ಣ ಪ್ರಕ್ರಿಯೆಯನ್ನು ನಿರ್ವಹಿಸಲು ಈ ವ್ಯವಸ್ಥೆಯು ಏಕಮಾತ್ರ ಡಿಜಿಟಲ್ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಕೃಷ್ಣಭೈರೇಗೌಡ ತಿಳಿಸಿದರು.

ಈ ವ್ಯವಸ್ಥೆಯು ಅಭಿವೃದ್ಧಿಯ ಅಗತ್ಯಗಳನ್ನು ನಾಗರಿಕರ ಹಕ್ಕುಗಳೊಂದಿಗೆ ಸಮತೋಲನಗೊಳಿಸುತ್ತದೆ. ವಿವಿಧ ತಂತ್ರಜ್ಞಾನಗಳ ಏಕೀಕರಣದೊಂದಿಗೆ ಮತ್ತಷ್ಟು ಮಾಡ್ಯೂಲ್‍ಗಳನ್ನು ಹಂತ ಹಂತವಾಗಿ ಪ್ರಾರಂಭಿಸಲಾಗುತ್ತಿದೆ ಎಂದು ಕೃಷ್ಣಭೈರೇಗೌಡ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News