ಕೆಸೆಟ್-2025 | ಕ್ಷೇಮ್ ಪ್ರಕಾರ ದಾಖಲೆ ಇದ್ದರೆ ಮಾತ್ರ ಪ್ರಮಾಣ ಪತ್ರ
ಬೆಂಗಳೂರು : ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ(ಕೆಸೆಟ್-25) ಅರ್ಹರಾದವರ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಿದ್ದು, ದಾಖಲೆ ಪರಿಶೀಲನೆ ಸಂದರ್ಭದಲ್ಲಿ ಕ್ಷೇಮ್ ಪ್ರಕಾರ ಮೂಲ ದಾಖಲೆಗಳನ್ನು ಸಲ್ಲಿಸಿದವರಿಗೆ ಮಾತ್ರ ಕೆಸೆಟ್ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಬುಧವಾರ ಪ್ರಕಟಣೆ ಹೊರಡಿಸಿರುವ ಅವರು, ದಾಖಲೆ ಪರಿಶೀಲನೆಗೆ ಆಹ್ವಾನಿಸುವ ದಿನದಂದು ಅರ್ಜಿಯಲ್ಲಿ ಉಲ್ಲೇಖಿಸಿರುವ ಪ್ರಕಾರ ಮೀಸಲಾತಿ ಸಂಬಂಧಿತ ದಾಖಲೆ ಹಾಗೂ ಸ್ನಾತಕೋತ್ತರ ಪದವಿ ಪ್ರಮಾಣ ಪತ್ರಗಳ ಮೂಲ ಪ್ರತಿಗಳನ್ನು ಹಾಜರುಪಡಿಸುವುದು ಕಡ್ಡಾಯ. ದಾಖಲೆಗಳನ್ನು ಪರಿಶೀಲಿಸಿ, ಸರಿ ಇದ್ದರೆ ಪ್ರಮಾಣ ಪತ್ರಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಪ.ಜಾತಿ ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಮೀಸಲಾತಿ ಕೋರಿರುವ ಅಭ್ಯರ್ಥಿಗಳು RD ಸಂಖ್ಯೆ ಇರುವ, ತಹಶೀಲ್ದಾರರಿಂದ ವಿತರಿಸಲ್ಪಟ್ಟ ಪ್ರಮಾಣ ಪತ್ರವನ್ನು ದಾಖಲೆ ಪರಿಶೀಲನೆ ವೇಳೆ ಕಡ್ಡಾಯವಾಗಿ ಹಾಜರುಪಡಿಸಬೇಕು. ಒಂದು ವೇಳೆ ಹಾಜರುಪಡಿಸದಿದ್ದಲ್ಲಿ ಪ್ರಮಾಣ ಪತ್ರ ನೀಡಲಾಗುವುದಿಲ್ಲ. ಹಾಗೂ ಆ ಪ್ರವರ್ಗಕ್ಕೆ ನಿಗದಿಯಾಗಿರುವ ಸ್ಲಾಟ್‌ಗಳನ್ನು ಭರ್ತಿ ಮಾಡಲು ಅವರ ನಂತರದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಿಯಮ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.