ಸಾಂದರ್ಭಿಕ ಚಿತ್ರ photo: magnific

ಬೆಂಗಳೂರು: ಮದ್ಯ ಸೇವನೆ ಮಾಡಿಕೊಂಡು ನ್ಯಾಯಾಲಯಕ್ಕೆ ಹಾಜರಾಗಿ ಕಲಾಪಕ್ಕೆ ಅಡ್ಡಿಪಡಿಸಿ, ನ್ಯಾಯಾಧೀಶರ ವಿರುದ್ಧ ಕೂಗಾಡಿದ ಆರೋಪದಡಿ ವಕೀಲರೊಬ್ಬರಿಗೆ ಕರ್ನಾಟಕ ಹೈಕೋರ್ಟ್‌ ಜೈಲು ಶಿಕ್ಷೆ ವಿಧಿಸಿದೆ.

ಕಾರವಾರದ ಪಂಕಜ್‌ ಕೌಶಿಕ್‌ ಶಿಕ್ಷೆಗೊಳಗಾದ ವಕೀಲ ಎಂದು ಗುರುತಿಸಲಾಗಿದೆ. ನ್ಯಾಯಮೂರ್ತಿಗಳಾದ ಅನು ಶಿವರಾಮನ್‌ ಮತ್ತು ಟಿ ವೆಂಕಟೇಶ್‌ ನಾಯಕ್‌ ಅವರ ವಿಭಾಗೀಯ ಪೀಠ ಈ ಕುರಿತು ಆದೇಶಿಸಿದೆ. ವಕೀಲರ ವರ್ತನೆ ಉದ್ದೇಶಪೂರ್ವಕ ಮತ್ತು ಹಠಮಾರಿತನದಿಂದ ಕೂಡಿದೆ. ಸಾಮಾಜಿಕ, ನೈತಿಕ, ನ್ಯಾಯಾಂಗ ನಡವಳಿಕೆ ಮತ್ತು ನಿಯಮಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ಹೊಂದಿರುವುದನ್ನು ಇದು ತೋರಿಸುತ್ತದೆ. ಶಿಕ್ಷೆ ವಿಧಿಸದಿದ್ದರೆ, ಇದು ಪುನರಾವರ್ತನೆಯಾಗುವ ಸಾಧ್ಯತೆಯಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಒಂದು ದಿನದ ಸರಳ ಜೈಲು ಶಿಕ್ಷೆ ಹಾಗೂ 2 ಸಾವಿರ ರೂ.ದಂಡ ವಿಧಿಸಿರುವ ನ್ಯಾಯಾಲಯವು ಈತನ ವಿರುದ್ಧ ಹೈಕೋರ್ಟ್‌ ರಿಜಿಸ್ಟ್ರಾರ್‌ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಕ್ರಿಮಿನಲ್‌, ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ಇತ್ಯರ್ಥಗೊಳಿಸಿದೆ.

ಪಂಕಜ್‌ ಕೌಶಿಕ್‌ ವಿರುದ್ದ ಆತನ ಪತ್ನಿಯೇ ದಾಖಲಿಸಿದ್ದ ಕೌಟುಂಬಿಕ ಹಿಂಸಾಚಾರ ಆರೋಪದ ಪ್ರಕರಣದಲ್ಲಿ ಸ್ವತಃ ವಾದ ಮಂಡಿಸಿದ್ದರು. 2022ರ ಎಪ್ರಿಲ್‌ನ ಎರಡು ಸಂದರ್ಭಗಳಲ್ಲಿ ವಿಚಾರಣಾ ನ್ಯಾಯಾಲಯದ ಕಲಾಪಕ್ಕೆ ಅಡ್ಡಿಪಡಿಸಿ ಅನುಚಿತವಾಗಿ ವರ್ತಿಸಿದ್ದರು ಎಂದು ಜಿಲ್ಲಾ ನ್ಯಾಯಾಲಯ ವರದಿ ಸಲ್ಲಿಸಿತ್ತು.

ಕೆಳಹಂತದ ಕೋರ್ಟ್ ನ್ಯಾಯಾಧೀಶರು ನನ್ನ ಪತ್ನಿಯಿಂದ ಹಣ ಪಡೆದು ಆಕೆಯ ಪರವಾಗಿ ತೀರ್ಪು ನೀಡಿದ್ದಾರೆ ಎಂದು ಕೌಶಿಕ್‌ ಮೌಖಿಕವಾಗಿ ಆರೋಪಿಸಿದ್ದಾರೆ. ಎಚ್ಚರಿಕೆ ನೀಡಿದರೂ ಹೈಕೋರ್ಟ್‌ ನ್ಯಾಯಾಧೀಶರ ವಿರುದ್ಧವೂ ಮಾನಹಾನಿಕರ ಹೇಳಿಕೆ ನೀಡಿದ್ದರು.

ಕೌಶಿಕ್‌ ನಡವಳಿಕೆಯಲ್ಲಿ ಸ್ಥಿರತೆ ಇಲ್ಲ ಎಂಬ ಹಿನ್ನೆಲೆಯಲ್ಲಿ ಸಿವಿಲ್ ನ್ಯಾಯಾಧೀಶರು ಅವರನ್ನು ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದರು. ಈ ವೇಳೆ ಕೌಶಿಕ್‌ ಮದ್ಯ ಸೇವಿಸಿದ್ದು ಕಂಡು ಬಂದಿದೆ ಎಂದು ಆಸ್ಪತ್ರೆ ತನ್ನ ಪರೀಕ್ಷಾ ವರದಿಯಲ್ಲಿ ದಾಖಲಿಸಿದೆ ಎಂದು ಜಿಲ್ಲಾ ನ್ಯಾಯಾಲಯದ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದನ್ನು ಆಧರಿಸಿ ಹೈಕೋರ್ಟ್‌ 2022ರಲ್ಲಿ ಸ್ವಯಂ ಪ್ರೇರಿತ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor