ಯಲಹಂಕ: ಪಟಾಕಿ ತರಲು ಕರೆದೊಯ್ದು ಬಾಲಕನ ಕೊಲೆ; ಆರೋಪಿ ಬಂಧನ
ಆರೋಪಿ ಭಾಸ್ಕರ್ ರೆಡ್ಡಿ
ಬೆಂಗಳೂರು: ಪಟಾಕಿ ತರಲು ಎಂದು ಕರೆದೊಯ್ದು ಬಾಲಕನನ್ನು ಕೊಲೆ ಮಾಡಿರುವ ಘಟನೆ ಯಲಹಂಕದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಪ್ರಜ್ವಲ್ (13) ಕೊಲೆಯಾದ ಬಾಲಕ. ಭಾಸ್ಕರ್ ರೆಡ್ಡಿ ಎಂಬ ಪಕ್ಕದ ಮನೆಯ ವ್ಯಕ್ತಿ ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ. ಇಬ್ಬರೂ ಯಲಹಂಕದ ವಿನಾಯಕನಗರ ನಿವಾಸಿಗಳಾಗಿದ್ದು, ಗಣೇಶ ವಿಸರ್ಜನೆಗೆ ಪಟಾಕಿ ತರಲು ಕಾರಿನಲ್ಲಿ ಕರೆದೊಯ್ದ ಆರೋಪಿ ಭಾಸ್ಕರ್ ರೆಡ್ಡಿ ಬಾಲಕನ ಮೇಲೆ ಹಲ್ಲೆ ಮಾಡಿ ಪೋಷಕರಿಗೆ ಕರೆ ಮಾಡಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ.
ಕುಡಿದ ಅಮಲಿನಲ್ಲಿದ್ದ ಆರೋಪಿಯು ಪ್ರಜ್ವಲ್ ಗೆ ಇಟ್ಟಿಗೆಯಿಂದ ಹಲ್ಲೆ ಮಾಡಿದ್ದು, ಈ ವೇಳೆ ಪ್ರಜ್ವಲ್ ಮೃತಪಟ್ಟಿದ್ದಾನೆ. ಬಳಿಕ ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿ ಅಂಧ್ರಪ್ರದೇಶದ ಕಡೆ ಹೋಗಲು ಯತ್ನಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಆದರೆ ಆತುರದಲ್ಲಿ ರಸ್ತೆಯಲ್ಲಿ ಎರಡು ಮೂರು ಕಡೆ ಅಪಘಾತ ಮಾಡಿಕೊಂಡ ಆರೋಪಿಯು ಚಿಕ್ಕಜಾಲ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ಪೊಲೀಸರು ಡಿಕ್ಕಿ ತೆರೆದು ನೋಡಿದಾಗ ಬಾಲಕನ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಪೊಲೀಸರು ವಿಚಾರಿಸಿದಾಗ ದಾರಿಯಲ್ಲಿ ಢಿಕ್ಕಿಯಾಗಿ ಬಾಲಕ ಮೃತಪಟ್ಟ. ಹೀಗಾಗಿ ಭಯಪಟ್ಟು ಅಂಧ್ರಪ್ರದೇಶದ ಕಡೆ ಮೃತ ದೇಹ ಬಿಸಾಡಲು ತೆಗೆದುಕೊಂಡು ಹೋಗುತ್ತಿದ್ದೆ ಎಂದು ಸುಳ್ಳು ಹೇಳಿದ್ದಾನೆ
ಆದರೆ ಪೊಲೀಸರು ಕೂಲಂಕಷವಾಗಿ ತನಿಖೆ ಮಾಡಿದಾಗ ಸತ್ಯಾಂಶ ಹೊರ ಬಂದಿದೆ ಎಂದು ತಿಳಿದು ಬಂದಿದೆ.