×
Ad

ಬನ್ನೇರುಘಟ್ಟ ಜೈವಿಕ ಉದ್ಯಾನವನಲ್ಲಿ ಚಿರತೆ ಸಾವು!

Update: 2025-11-21 20:21 IST

ಸಾಂದರ್ಭಿಕ ಚಿತ್ರ | PC : Image by wirestock on Freepik

ಬೆಂಗಳೂರು : ಬನ್ನೇರುಘಟ್ಟ ಜೈವಿಕ ಉದ್ಯಾನವನಲ್ಲಿ ಗಂಡು ಚಿರತೆಯೊಂದು ನ.19ರ ಬುಧವಾರದಂದು ಮೃತಪಟ್ಟಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಶುಕ್ರವಾರ ಪತ್ರಿಕಾ ಪ್ರಕಟನೆ ಹೊರಡಿಸಿರುವ ಅಧಿಕಾರಿಗಳು, 2023ರ ಜನವರಿ 3ರಂದು ಚಾಮರಾಜನಗರದ ಬಿಆರ್‍ಟಿ ಹುಲಿ ಸಂರಕ್ಷಿತ ಪ್ರದೇಶದಿಂದ ಈ ಚಿರತೆಯನ್ನು ರಕ್ಷಿಸಿ, ಇಲ್ಲಿಗೆ ಸ್ಥಳಾಂತರಿಸಲಾಗಿತ್ತು. ಆಗ ಅದು ಕೇವಲ ಮೂರು ತಿಂಗಳ ಮರಿಯಾಗಿತ್ತು.

ಈ ಚಿರತೆಯು ಅಕ್ಟೋಬರ್ 30ರಿಂದ ಆಹಾರ ಸೇವನೆ ಕಡಿಮೆ ಮಾಡಿದ್ದು, ಹೆಚ್ಚಿನ ಜ್ವರ ಮತ್ತು ದೌರ್ಬಲ್ಯದಿಂದ ಬಳಲುತ್ತಿತ್ತು. ತಕ್ಷಣಕ್ಕೆ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಸೂಕ್ತ ಚಿಕಿತ್ಸೆ ಆರಂಭಿಸಿದ್ದರಿಂದ ಆಹಾರ ಸೇವನೆಯು ಸ್ವಲ್ಪ ಮಟ್ಟಿಗೆ ಸುಧಾರಿಸಿತ್ತು. ಬಳಿಕ ಮಾಂಸದಲ್ಲೇ ಔಷಧವನ್ನು ನೀಡುವ ವ್ಯವಸ್ಥೆಯನ್ನೂ ಮಾಡಲಾಗಿತ್ತು ಎಂದು ಪ್ರಕಟನೆಯಲ್ಲಿ ವಿವರಿಸಲಾಗಿದೆ.

ಆದಾಗ್ಯೂ, ನವೆಂಬರ್ 13ರಿಂದ ಮತ್ತೆ ಆಹಾರ ಸೇವನೆ ನಿಲ್ಲಿಸಿದ ಹಿನ್ನೆಲೆಯಲ್ಲಿ, ಮತ್ತೊಮ್ಮೆ ರಕ್ತದ ಪರೀಕ್ಷೆಗಾಗಿ ಮಾದರಿ ಕಳುಹಿಸಿ, ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ, ಎದೆಗೂಡಿನ ಮತ್ತು ಹೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಕ್ತದ ಛಾಯೆಯ ದ್ರವ ಸಂಗ್ರಹ ಆಗಿರುವುದರಿಂದ ಪ್ರಾಣಿಯು ಶ್ವಾಸಕೋಶ ಮತ್ತು ಹೃದಯ ಬಡಿತವನ್ನು ಕಳೆದುಕೊಂಡು ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಣಿಯ ಒಳಾಂಗಗಳ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಐಎಎಚ್ ಮತ್ತು ವಿಬಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಮರಣದ ನಿಖರ ಕಾರಣ ತಿಳಿಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News