ಚಿಕ್ಕಬಳ್ಳಾಪುರ : ತಲೆಮರೆಸಿಕೊಂಡಿದ್ದ ಜೀವಾವಧಿ ಶಿಕ್ಷೆಗೊಳಗಾದ ಕೈದಿಯ ಬಂಧನ
ಬೆಂಗಳೂರು, ಅ.19: ಪೆರೋಲ್ ಮೇಲೆ ಬಂದು 6 ವರ್ಷ 10 ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಜೀವಾವಧಿ ಶಿಕ್ಷೆಗೊಳಗಾದ ಕೈದಿಯನ್ನು ಪರಪ್ಪನ ಅಗ್ರಹಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಚಿಕ್ಕಬಳ್ಳಾಪುರದಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ನರಸಿಂಹರೆಡ್ಡಿ (56) ಎಂದು ಗುರುತಿಸಲಾಗಿದೆ. ಈ ತ 2013ರಲ್ಲಿ ತುಮಕೂರು ಜಿಲ್ಲೆಯ ಪಾವಗಡದಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದಲ್ಲದೆ, ಮನೆ ಮಾಲಕರ ಕೊಲೆ ಮಾಡಿದ್ದನು. ಈ ಸಂಬಂಧ ಪಾವಗಡ ಪೊಲೀಸ್ ಠಾಣಾ ಕೊಲೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ನಡೆಸಿ, ಆರೋಪಿಯನ್ನು ಬಂಧಿಸಿದ ಪೊಲೀಸರು, ನರಸಿಂಹರೆಡ್ಡಿ ವಿರುದ್ಧ ತನಿಖೆಯನ್ನು ಪೂರ್ಣಗೊಳಿಸಿ ಮಧುಗಿರಿ ಜಿಲ್ಲಾ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ನ್ಯಾಯಾಲಯವು ಆರೋಪಿ ನರಸಿಂಹ ರೆಡ್ಡಿಗೆ ಜೀವಾವಧಿ ಶಿಕ್ಷೆ ತೀರ್ಪು ನೀಡಿ ಆದೇಶ ಮಾಡಿತ್ತು. ನಂತರ ಆರೋಪಿಯನ್ನು ಬೆಂಗಳೂರು ಕೇಂದ್ರ ಕಾರಾಗೃಹದ ಬಂಧನದಲ್ಲಿ ಇಡಲಾಗಿತ್ತು. 2019ರ ಸೆ.7ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ 30 ದಿನಗಳ ಪೆರೋಲ್ ಮೇಲೆ ತೆರಳಿದ್ದ ಈತ ಮತ್ತೆ 30 ದಿನಗಳ ಹೆಚ್ಚುವರಿ ಪೆರೋಲ್ ರಜೆಯನ್ನು ವಿಸ್ತರಣೆ ಮಾಡಿಕೊಂಡಿದ್ದನು.
ವಿಸ್ತರಣೆಗೊಂಡಿರುವ ಪೆರೋಲ್ ನಂತೆ 2019ರ ನ.26ರಂದು ಪೆರೋಲ್ ರಜೆ ಮುಗಿಸಿಕೊಂಡು ಕೇಂದ್ರ ಕಾರಾಗೃಹಕ್ಕೆ ಸ್ವಯಂ ಶರಣಾಗಬೇಕಾಗಿತ್ತು. ಆದರೆ ಈತ ಪೆರೋಲ್ ಮುಗಿದರೂ ಕೇಂದ್ರ ಕಾರಾಗೃಹಕ್ಕೆ ಬರದೇ ತಲೆಮರೆಸಿಕೊಂಡಿದ್ದಾನೆ.
ಈ ಸಂಬಂಧ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಶೇಷುಮೂರ್ತಿ ನೀಡಿದ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಿಕ್ಷಾ ಬಂಧಿಯಾದ ಈತ ಪತ್ತೆಯಾಗದ ಕಾರಣ ನ್ಯಾಯಾಲಯವು ಈತನ ವಿರುದ್ಧ ಜಾಮೀನು ರಹಿತ ವಾರೆಂಟ್ ಅನ್ನು ಹೊರಡಿಸಿತ್ತು. ಆರೋಪಿಯ ಬಗ್ಗೆ ಮಾಹಿತಿ ನೀಡುವವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಆರೋಪಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಬಂಧಿಸಿದ್ದಾರೆ.