ಮದ್ದೂರು ಗಲಭೆ | ದ್ವೇಷ ಬಿತ್ತಿದ ಆರೋಪ; ಮಹಿಳೆ ವಿರುದ್ಧ ದೂರು
ಬೆಂಗಳೂರು, ಸೆ.11 : ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಬಿತ್ತಿದ, ಸಾರ್ವಜನಿಕ ದುಷ್ಕೃತ್ಯವನ್ನು ಪ್ರಚೋದಿಸಿದ ಆರೋಪದಡಿ ಜ್ಯೋತಿಗೌಡ ವಿರುದ್ಧ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಜ್ಯ ಯುವ ಕಾಂಗ್ರೆಸ್‍ನ ಕಾನೂನು ವಿಭಾಗದ ರಾಜ್ಯಾಧ್ಯಕ್ಷ ಎಂ.ಎಂ.ಶ್ರೀಧರ ಅವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು, ಸೆ.7ರಂದು, ಮದ್ದೂರಿನಲ್ಲಿ ನಡೆದ ಗಣೇಶ ವಿಸರ್ಜನೆ ಮೆರವಣಿಗೆಯ ಸಮಯದಲ್ಲಿ ಜ್ಯೋತಿಗೌಡ ಎಂಬಾಕೆ ಮುಸ್ಲಿಮ್ ಸಮುದಾಯದ ವಿರುದ್ಧ ದ್ವೇಷಪೂರಿತ ಹೇಳಿಕೆ ನೀಡುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸಲು ಯತ್ನಿಸಿದ್ದಾರೆ. ಅಲ್ಲದೆ, ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೂ ಅವಹೇಳನಾಕಾರಿ ಹೇಳಿಕೆ ನೀಡಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿ ಜ್ಯೋತಿಗೌಡ ಅವರು ಕೋಮು ಘರ್ಷಣೆ ಉಂಟಾಗುವ ರೀತಿಯಲ್ಲಿ ಘೋಷಣೆಗಳನ್ನು ಕೂಗಿ ಕೋಮು ಸಾಮರಸ್ಯಕ್ಕೆ ಭಂಗವನ್ನುಂಟುಮಾಡಿದ್ದಾರೆ. ಆದ್ದರಿಂದ ಆರೋಪಿ ವಿರುದ್ಧ ತಕ್ಷಣ ಎಫ್‍ಐಆರ್ ದಾಖಲಿಸಬೇಕು, ಎಫ್‍ಎಸ್‍ಎಲ್‍ನಿಂದ ಆಕೆಯ ಇನ್‍ಸ್ಟಾಗ್ರಾಮ್ ಖಾತೆಯ ಡೇಟಾವನ್ನು ಒಳಗೊಂಡಂತೆ ಎಲ್ಲ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಬೇಕು ಜೊತೆಗೆ ಆರೋಪಿಯನ್ನು ಬಂಧಿಸಿ ಸಂಪೂರ್ಣ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಎಂ.ಎಂ.ಶ್ರೀಧರ ಒತ್ತಾಯಿಸಿದ್ದಾರೆ.