×
Ad

ʼಇನ್ವೆಸ್ಟ್ ಕರ್ನಾಟಕʼದಲ್ಲಿ 98 ಕಂಪನಿಗಳ ಜತೆ ಹೂಡಿಕೆ ಒಡಂಬಡಿಕೆ : ಎಂ.ಬಿ.ಪಾಟೀಲ್

Update: 2025-03-04 18:12 IST

ಬೆಂಗಳೂರು : ಇತ್ತೀಚೆಗೆ ನಡೆದ ಇನ್ವೆಸ್ಟ್ ಕರ್ನಾಟಕ-2025ರ ಸಮಾವೇಶದಲ್ಲಿ 98 ಕಂಪೆನಿಗಳೊಂದಿಗೆ ಮಾಡಿಕೊಂಡ ಒಡಂಬಡಿಕೆಯಿಂದ 6,23,970 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಮಂಗಳವಾರ ಪರಿಷತ್‍ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‍ನ ಎಂ.ವಿ.ಸುಂಕನೂರ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೆ ನಡೆದಿದ್ದ ಇನ್ವೆಸ್ಟ್ ಕರ್ನಾಟಕ-2022ರ ಸಮಾವೇಶದಲ್ಲಿ ಉದ್ಯಮ ಪ್ರಾರಂಭಿಸಲು 57 ಕಂಪೆನಿಗಳೊಂದಿಗೆ 5,41,369 ಕೋಟಿ ಹೂಡಿಕೆ ಮಾಡಲು ಒಪ್ಪಂದಗಳಿಗೆ ಸಹಿ ಮಾಡಲಾಗಿತ್ತು ಎಂದರು.

ಈ 57 ಕಂಪೆನಿಗಳಲ್ಲಿ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಗಳಲ್ಲಿ ಒಟ್ಟು 20 ಕಂಪೆನಿಗಳಿಗೆ ಅನುಮೋದನೆ ನೀಡಲಾಗಿದ್ದು, ಈ ಪ್ರಸಾವನೆಗಳಿಂದ 2,01,167 ಕೋಟಿ ರು. ಬಂಡವಾಳ ಹೂಡಿಕೆಯಾಗಲಿದೆ ಹಾಗೂ 70,740 ಉದ್ಯೋಗ ಸೃಜನೆಯಾಗಲಿದೆ. ಇವುಗಳಲ್ಲಿ 2 ಯೋಜನೆಗಳು ಅನುಷ್ಠಾನಗೊಂಡಿರುತ್ತವೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ಈಗಿನ ಸಮಾವೇಶದಲ್ಲಿ ಹೂಡಿಕೆಯ ಪ್ರಮಾಣ ಹೆಚ್ಚಿದ್ದು, ಇದರಿಂದ ಕರ್ನಾಟಕವು ಇಡೀ ದೇಶದಲ್ಲೇ ಮಾದರಿ ರಾಜ್ಯವಾಗಿ ಶರವೇಗದಲ್ಲಿ ಅಭಿವೃದ್ಧಿ ಕಾಣಲಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News