ಅಮೆರಿಕನ್ ಕಾನ್ಸುಲ್ ಜನರಲ್ ಕ್ರಿಸ್, ಪೋಲೆಂಡ್ ನಿಯೋಗದ ಜತೆ ಹೂಡಿಕೆ, ಸಹಭಾಗಿತ್ವ ಚರ್ಚೆ : ಎಂ.ಬಿ.ಪಾಟೀಲ್
ಬೆಂಗಳೂರು : ಭಾರತದಲ್ಲಿನ ಅಮೆರಿಕನ್ ಕಾನ್ಸುಲ್ ಜನರಲ್ ಕ್ರಿಸ್ ಹಾಡ್ಜಸ್ ಮತ್ತು ಪೋಲೆಂಡ್ ದೇಶದ ಡಿಜಿಟಲೀಕರಣ ಖಾತೆ ಸಹಾಯಕ ಸಚಿವ ರಫಾಲ್ ರೊಸಿನ್ಕ್ಸಿ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರನ್ನು ಬುಧವಾರ ಪ್ರತ್ಯೇಕವಾಗಿ ಭೇಟಿಯಾಗಿ, ಬಂಡವಾಳ ಹೂಡಿಕೆ ಮತ್ತು ನಾನಾ ವಲಯಗಳಲ್ಲಿ ಸಹಭಾಗಿತ್ವ ವರ್ಧನೆ ಕುರಿತು ಮಾತುಕತೆ ನಡೆಸಿದರು.
ವಿಧಾನಸೌಧದಲ್ಲಿ ನಡೆದ ಈ ಭೇಟಿಗಳಲ್ಲಿ ಮೊದಲಿಗೆ ಕ್ರಿಸ್ ಅವರೊಂದಿಗೆ ಮಾತುಕತೆ ನಡೆಸಿದ ಸಚಿವರು, ಅಮೆರಿಕದ ವಿಶ್ವವಿದ್ಯಾಲಯಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಮೆಡ್-ಟೆಕ್ ಕಂಪನಿಗಳಿಗೆ ರಾಜ್ಯದಲ್ಲಿ ಹೆಚ್ಚಿನ ಅವಕಾಶವಿರುವ ಸಂಗತಿಯನ್ನು ಮನದಟ್ಟು ಮಾಡಿಕೊಟ್ಟಿರುವುದಾಗಿ ತಿಳಿಸಿದರು.
ಪೋಲೆಂಡ್ ನಿಯೋಗದ ಭೇಟಿ: ಪೋಲೆಂಡ್ ಸರಕಾರದಲ್ಲಿ ಡಿಜಿಟಲೀಕರಣ ಖಾತೆಯ ಉಪಮಂತ್ರಿಯಾಗಿರುವ ರಫಾಲ್ ರೊಸಿನ್ಕ್ಸಿ ನೇತೃತ್ವದ ಉನ್ನತ ಮಟ್ಟದ ನಿಯೋಗವು ಉನ್ನತ ಶಿಕ್ಷಣ, ಸಂಶೋಧನೆ, ಆಧುನಿಕ ತಯಾರಿಕೆ. ವಾಣಿಜ್ಯ, ತಂತ್ರಜ್ಞಾನ ಮತ್ತು ರಕ್ಷಣಾ ಉದ್ಯಮಗಳಲ್ಲಿ ಕರ್ನಾಟಕದೊಂದಿಗೆ ಸಹಭಾಗಿತ್ವ ಹೊಂದಲು ಇರುವ ಅವಕಾಶಗಳ ಬಗ್ಗೆ ಎಂ.ಬಿ.ಪಾಟೀಲ್ ಅವರೊಂದಿಗೆ ಮಾತುಕತೆ ನಡೆಸಿತು.
ಭಾರತ ಮತ್ತು ಪೋಲೆಂಡ್ 2023ರಿಂದ 2028ರವರೆಗೆ ಚಾಲ್ತಿಯಲ್ಲಿರುವ ಐದು ವರ್ಷಗಳ ಕ್ರಿಯಾ ಯೋಜನೆಯನ್ನು ಹೊಂದಿವೆ. ಇದರಡಿಯಲ್ಲಿ ಗಣಿಗಾರಿಕೆ, ಸೈಬರ್ ಭದ್ರತೆ, ಆರೋಗ್ಯ, ಇಂಧನ ಮತ್ತು ಸುಸ್ಥಿರತೆ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಹೊಂದಿವೆ. ಇದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲುಪೋಲೆಂಡ್ ಒಲವನ್ನು ವ್ಯಕ್ತಪಡಿಸಿದೆ. ಅವರಿಗೆ ರಾಜ್ಯದಲ್ಲಿರುವ ಕೈಗಾರಿಕಾ ಕಾರ್ಯಪರಿಸರ, ನೀತಿ, ರಿಯಾಯಿತಿ ಇತ್ಯಾದಿಗಳ ಬಗ್ಗೆ ವಿವರಿಸಲಾಯಿತು ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ಈ ನಿಯೋಗದಲ್ಲಿ ದಿಲ್ಲಿಯಲ್ಲಿರುವ ಪೋಲೆಂಡ್ ರಾಯಭಾರಿ ಕಚೇರಿಯ ಮುಖ್ಯಸ್ಥ ಪಿಯೋಟರ್ ಸ್ವಿಟೈಸ್ಕಿ, ಮುಂಬೈನಲ್ಲಿರುವ ಪೋಲೆಂಡ್ ರಾಯಭಾರಿ ಮುಖ್ಯಸ್ಥ ಟೋಮಾಸ್ ವೆಲ್ಗೋಮಾಸ್ ಇದ್ದರು.
ಸಭೆಯಲ್ಲಿ ಬೃಹತ್ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.