×
Ad

ಜನಾರ್ದನ ರೆಡ್ಡಿ ಜತೆ ಬಿಜೆಪಿ ಕೈಜೋಡಿಸಿದ್ದೇಕೆ? : ಎಂ.ಬಿ.ಪಾಟೀಲ್

Update: 2026-01-12 19:08 IST

ಬೆಂಗಳೂರು : ‘ಅಕ್ರಮ ಗಣಿಗಾರಿಕೆಯ ಮೂಲಕ ಕುಖ್ಯಾತಿ ಗಳಿಸಿದಂತಹ ಗಾಲಿ ಜನಾರ್ದನ ರೆಡ್ಡಿ ಅವರನ್ನು ಬಿಜೆಪಿ ಹೊರ ಹಾಕಿತ್ತು. ಇದೀಗ ಅವರ ಜೊತೆಯಲ್ಲೆ ಕೈಜೋಡಿಸಿದ್ದು ಏಕೆ?. ರೆಡ್ಡಿ ಬಳಿ ಇರುವ ದುಡ್ಡಿಗಾಗಿಯೇ? ಅಥವಾ ಅಕ್ರಮ ಗಣಿಗಾರಿಕೆಯ ಪಾಲುದಾರಿಕೆಗಾಗಿಯೇ?’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರಶ್ನಿಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಮತ್ತವರ ಬೆಂಬಲಿಗರು ಆಕ್ರಮ ಗಣಿಗಾರಿಕೆ ಮಾಡಿದ್ದಕ್ಕಾಗಿ ಬಿಜೆಪಿ ಅವರನ್ನು ಹೊರ ಹಾಕಿತ್ತು. ಈಗ ರೆಡ್ಡಿಯ ಬೆಂಬಲಕ್ಕೆ ಬಿಜೆಪಿ ನಾಯಕರು ನಿಲ್ಲುತ್ತಿದ್ದು, ಇದರ ಗೂಡಾರ್ಥ ಜನರಿಗೆ ಅರ್ಥವಾಗುತ್ತದೆ ಎಂದು ಟೀಕಿಸಿದರು.

ಈ ಹಿಂದೆ ಅಕ್ರಮ ಗಣಿಗಾರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ ಬೆಂಗಳೂರಿನಿಂದ ಬಳ್ಳಾರಿಯ ವರೆಗೂ ಪಾದಯಾತ್ರೆ ಮಾಡಿತ್ತು. ಈಗ ಬಿಜೆಪಿ ಯಾವ ಕಾರಣಕ್ಕೂ ಪಾದಯಾತ್ರೆ ಮಾಡುತ್ತಿದೆ. ಬಳ್ಳಾರಿ ಬ್ಯಾನರ್ ಗಲಾಟೆ ಇಬ್ಬರು ವ್ಯಕ್ತಿಗಳ ನಡುವಿನ ಜಗಳ. ಅದಕ್ಕಾಗಿ ಪಾದಯಾತ್ರೆ ಮಾಡುವುದು ಉಚಿತವೇ? ಎಂದು ಎಂ.ಬಿ.ಪಾಟೀಲ್ ಕೇಳಿದರು.

ಜನಾರ್ದನ ರೆಡ್ಡಿ ಸಚಿವರಾಗಿದ್ದಾಗ ತಮ ದುರಾಸೆಗಾಗಿ ‘ರಿಪಬ್ಲಿಕ್ ಆಫ್ ಬಳ್ಳಾರಿ’ ಮಾಡಿಕೊಂಡಿದ್ದರು. ರಾಜ್ಯದ ಗಡಿಯನ್ನೇ ಧ್ವಂಸ ಮಾಡಿ ಅಕ್ರಮ ಗಣಿಗಾರಿಕೆ ಮಾಡಿದ್ದರು. ಗಣಿಗಾರಿಕೆ ನಡೆಸುವವರಿಂದ ಪಾಲು ಪಡೆಯುತ್ತಿದ್ದರು. ಅರಣ್ಯದಲ್ಲೂ ಗಣಿಗಾರಿಕೆ ಮಾಡಿದ ಅರೋಪಕ್ಕೆ ಗುರಿಯಾಗಿದ್ದರು ಎಂದು ಅವರು ವಾಗ್ದಾಳಿ ನಡೆಸಿದರು.

ಉದ್ಯೋಗ ಖಾತರಿ ಯೋಜನೆ ವಿಚಾರವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಬಹಿರಂಗ ಚರ್ಚೆಗೆ ಬರಲಿ. ಯಾವುದಾದರೂ ಸಭಾಂಗಣದಲ್ಲಿ ಚರ್ಚೆ ನಡೆಯಲಿ. ಕುಮಾರಸ್ವಾಮಿ ಬಹಿರಂಗ ಚರ್ಚೆಗೆ ಬರಲು ಸಿದ್ದರಿದ್ದಾರೆಯೇ? ಎಂದು ಪಾಟೀಲ್ ಸವಾಲು ಹಾಕಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News