ದಾವೋಸ್‍ಗೆ ಪ್ರಯಾಣ ಬೆಳೆಸಿದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ನೇತೃತ್ವದ ನಿಯೋಗ
ಬೆಂಗಳೂರು : ಸ್ವಿಟ್ಜರ್ಲೆಂಡ್‌ನ ದಾವೋಸ್-ಕ್ಲೋಸ್ಟರ್ಸ್‍ನಲ್ಲಿ ಇದೇ 19ರಿಂದ 23ರವರೆಗೆ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಲು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು ರವಿವಾರ ಪ್ರಯಾಣ ಬೆಳೆಸಿದೆ.
ಈ ಭೇಟಿ ಸಂದರ್ಭದಲ್ಲಿ ಸಚಿವ ಎಂ.ಬಿ.ಪಾಟೀಲ್ ಅವರು, ಹೂಡಿಕೆದಾರರು ತ್ವರಿತವಾಗಿ ನಿರ್ಧಾರಕ್ಕೆ ಬರುವುದಕ್ಕೆ ನೆರವಾಗಲು ಹಾಗೂ ಯೋಜನೆಗಳನ್ನು ಶೀಘ್ರವಾಗಿ ಕಾರ್ಯಾರಂಭ ಮಾಡಲು ಉತ್ತೇಜನ ನೀಡುವ ಸ್ಪಷ್ಟ ಉದ್ದೇಶದಿಂದ ನಾಲ್ಕು ದಿನಗಳ ಕಾಲ 45ಕ್ಕೂ ಹೆಚ್ಚು ದ್ವಿಪಕ್ಷೀಯ ಸಭೆಗಳು, ದುಂಡುಮೇಜಿನ ಸಮಾಲೋಚನೆಗಳಲ್ಲಿ ಭಾಗವಹಿಸಲಿದ್ದಾರೆ.
ತಯಾರಿಕೆ, ನವೀಕರಿಸಬಹುದಾದ ಇಂಧನ ಮೂಲಗಳು, ಎಲೆಕ್ಟ್ರಾನಿಕ್ಸ್/ಇಎಸ್‍ಡಿಎಂ, ಡೇಟಾ ಸೆಂಟರ್‍ಗಳು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರ (ಜಿಸಿಸಿ) ಸ್ಥಾಪನೆ ಸಂಬಂಧ ಜಾಗತಿಕ ಹೂಡಿಕೆದಾರರು ಹಾಗೂ ಉದ್ಯಮ ದಿಗ್ಗಜರ ಜೊತೆಗೆ ಮಾತುಕತೆ ನಡೆಸಲಾಗುವುದು ಎಂದು ಪಾಟೀಲ್ ತಿಳಿಸಿದ್ದಾರೆ.
ಬಹುರಾಷ್ಟ್ರೀಯ ಪ್ರಮುಖ ಕಂಪನಿಗಳಾದ ಅಮೆಜಾನ್ ವೆಬ್ ಸರ್ವೀಸಸ್, ಲೆನೊವೊ, ವಾಸ್ಟ್ ಸ್ಪೇಸ್, ಕೋಕಾ-ಕೋಲಾ, ಫಿಲಿಪ್ ಮಾರಿಸ್, ಇಂಪೀರಿಯಲ್ ಕಾಲೇಜ್ ಲಂಡನ್, ಸಿಂಗಪುರ ಆರ್ಥಿಕ ಅಭಿವೃದ್ಧಿ ಮಂಡಳಿ ಜೊತೆ ರಾಜ್ಯದ ನಿಯೋಗವು ಮಾತುಕತೆ ನಡೆಸಲಿದೆ. ಬಂಡವಾಳ ಹೂಡಿಕೆ ಹಾಗೂ ಕೈಗಾರಿಕೆಗಳ ಸ್ಥಾಪನೆ-ವಿಸ್ತರಣೆಗೆ ರಾಜ್ಯದಲ್ಲಿ ಇರುವ ವಿಪುಲ ಅವಕಾಶಗಳು ಹಾಗೂ ಸೌಲಭ್ಯಗಳನ್ನು ಜಾಗತಿಕ ಹೂಡಿಕೆದಾರರಿಗೆ ನಿಯೋಗವು ಮನದಟ್ಟು ಮಾಡಿಕೊಡಲಿದೆ ಎಂದು ಅವರು ಹೇಳಿದ್ದಾರೆ.
ಹೂಡಿಕೆ ನಿರ್ಧಾರಗಳನ್ನು ಅನುಷ್ಠಾನಕ್ಕೆ ಪರಿವರ್ತಿಸುವುದು, ಕೈಗಾರಿಕೆಗಳ ಸ್ಥಾಪನೆಗೆ ಸನ್ನದ್ಧ ಸ್ಥಿತಿಯಲ್ಲಿ ಇರುವ ಭೂಮಿ, ಶಾಸನಬದ್ಧ ಅನುಮೋದನೆಗಳು, ಮೂಲಸೌಕರ್ಯಗಳ ಲಭ್ಯತೆ, ವಿವಿಧ ವಲಯಗಳ ಅಗತ್ಯ ಈಡೇರಿಸುವ ನಿರ್ದಿಷ್ಟ ಮೂಲಸೌಕರ್ಯಗಳು, ಪೂರೈಕೆ ಸರಪಳಿ ಸಂಪರ್ಕಗಳು, ಪರಿಣತ ಮಾನವ ಸಂಪನ್ಮೂಲದ ಲಭ್ಯತೆ ಹಾಗೂ ಉತ್ತೇಜನಗಳ ಬಗ್ಗೆ ಚರ್ಚೆ ಕೇಂದ್ರೀಕೃತಗೊಂಡಿರಲಿದೆ. ವಾಸ್ತವ ಹೂಡಿಕೆಗಳು ಮತ್ತು ಅದರ ಪರಿವರ್ತನೆಗೆ ರಾಜ್ಯ ಸರ್ಕಾರವು ಆದ್ಯತೆ ನೀಡಲಿದೆ ಎಂದು ಅವರು ವಿವರಿಸಿದ್ದಾರೆ.
‘ಕರ್ನಾಟಕದ ಪ್ರವರ್ಧಮಾನಕ್ಕೆ ಬರುತ್ತಿರುವ ಕೈಗಾರಿಕಾ ಅನುಕೂಲತೆಗಳಿಗೆ’ ಸಂಬಂಧಿಸಿದಂತೆ ಜಾಗತಿಕ ಹೂಡಿಕೆದಾರರನ್ನು ರಾಜ್ಯದತ್ತ ಆಕರ್ಷಿಸಲು ಪ್ರತ್ಯೇಕ ಅಧಿವೇಶನ ಆಯೋಜಿಸಲಾಗುವುದು. ಹೂಡಿಕೆಗೆ ಯೋಗ್ಯವಾಗಿರುವ ಅವಕಾಶಗಳು, ಕೈಗಾರಿಕೆಗಳನ್ನು ತ್ವರಿತವಾಗಿ ಕಾರ್ಯಾರಂಭ ಮಾಡಲು ನೆರವಾಗಲಿರುವ ರಾಜ್ಯದ ಸಾಮಥ್ರ್ಯದ ಬಗ್ಗೆ ವಿವರಗಳನ್ನು ಹಂಚಿಕೊಳ್ಳಲಾಗುವುದು. ಜಾಗತಿಕ ಹೂಡಿಕೆದಾರರ ಪಾಲಿಗೆ ಕರ್ನಾಟಕವು ಅನುಷ್ಠಾನ ಕೇಂದ್ರಿತ ಗಮ್ಯಸ್ಥಾನ ಆಗಿರುವುದನ್ನೂ ಇದು ಮನದಟ್ಟು ಮಾಡಿಕೊಡಲಾಗುವುದು ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಬಿಡಿಎ ಆಯುಕ್ತ ಮಣಿವಣ್ಣನ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ನಿಯೋಗದಲ್ಲಿ ತೆರಳಿದರು.