ಜಿಂದಾಲ್‍ನಿಂದ 5 ವರ್ಷದಲ್ಲಿ 1.20 ಲಕ್ಷ ಕೋಟಿ ರೂ.ಹೂಡಿಕೆ : ಎಂ.ಬಿ.ಪಾಟೀಲ್
► ‘ಚಾಮರಾಜನಗರ, ಬಳ್ಳಾರಿ, ವಿಜಯಪುರದಲ್ಲಿ ಹೂಡಿಕೆಗೆ ಪ್ರೋತ್ಸಾಹ’ ► ಹೂಡಿಕೆ ಆಕರ್ಷಣೆಗೆ ಮುಂಬೈನಲ್ಲಿ 2 ದಿನಗಳ ರೋಡ್ ಶೋ
ಬೆಂಗಳೂರು : ಉಕ್ಕು ತಯಾರಿಕೆ ಮತ್ತು ಇತರ ವಲಯಗಳಲ್ಲಿ ಛಾಪು ಮೂಡಿಸಿರುವ ಜಿಂದಾಲ್ ಸಮೂಹವು ರಾಜ್ಯದಲ್ಲಿ ಮುಂದಿನ ಐದು ವರ್ಷಗಳಲ್ಲಿ 1.20ಲಕ್ಷ ಕೋಟಿ ರೂ.ಬಂಡವಾಳ ಹೂಡಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಂಗಳವಾರ ಹೇಳಿದ್ದಾರೆ.
ರಾಜ್ಯದ ಕೈಗಾರಿಕಾ ವಲಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸಬೇಕೆಂಬ ಉದ್ದೇಶದಿಂದ ಅವರು ರಾಷ್ಟ್ರದ ವಾಣಿಜ್ಯ ಕೇಂದ್ರ ಮುಂಬೈನಲ್ಲಿ ಎರಡು ದಿನಗಳ ರೋಡ್ ಶೋ ಹಮ್ಮಿಕೊಂಡಿದ್ದಾರೆ. ಜಿಂದಾಲ್ ಅಧ್ಯಕ್ಷ ಸಜ್ಜನ್ ಜಿಂದಾಲ್ ಮತ್ತು ಜೆಎಂಡಿ ಜಯಂತ್ ಆಚಾರ್ಯ ಅವರ ಜತೆ ಸಚಿವರು ಸಭೆ ನಡೆಸಿದರು.
ಸಂಪುಟ ವಿಸ್ತರಣೆ ಮುಗಿದ ಬೆನ್ನಲ್ಲೇ, ಸೋಮವಾರವೇ ಮುಂಬೈಗೆ ಅವರು ಪ್ರಯಾಣ ಬೆಳೆಸಿದ್ದಾರೆ. ಎಲ್ ಅಂಡ್ ಟಿ, ಬಿಸ್ಲೆರಿ, ರೇಮಂಡ್ ಟಾರ್ಕ್-ಹೀರಾನಂದಾನಿ, ಸನೋಫಿ ಹೆಲ್ತ್, ಮ್ಯಾಗ್ನಂ, ಬಾಲು ಫೋರ್ಜ್ ಮತ್ತು ಮ್ಯಾಕ್ಸ್ ಏರೋಸ್ಪೇಸ್ ಸೇರಿದಂತೆ ಇತರ 10 ಪ್ರಮುಖ ಕಂಪೆನಿಗಳೊಂದಿಗೆ ಅವರು ಮಾತುಕತೆ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ಪಾಟೀಲ್, ಉಕ್ಕು ಉತ್ಪಾದನೆಯಿಂದ ಹಿಡಿದು ಬಣ್ಣದ ತಯಾರಿಕೆವರೆಗೆ ನಾನಾ ವಲಯಗಳಲ್ಲಿ ಛಾಪು ಮೂಡಿಸಿರುವ ಜಿಂದಾಲ್ ಸ್ಟೀಲ್ ವಕ್ರ್ಸ್ ಕಂಪೆನಿಯು ಬಂಡವಾಳ ಹೂಡಿಕೆಗೆ ರಾಜ್ಯವನ್ನು ಅಚ್ಚುಮೆಚ್ಚಿನ ತಾಣವೆಂದು ನಂಬಿದೆ. ಜಿಂದಾಲ್ ಸಮೂಹವು ಮೂರು ದಶಕಗಳಿಂದಲೂ ಕೈಗಾರಿಕಾ ವಲಯದಲ್ಲಿ ಹೆಜ್ಜೆ ಗುರುತು ಮೂಡಿಸಿದ್ದು, ಬಳ್ಳಾರಿ ಮತ್ತು ವಿಜಯನಗರ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಕಾರಣವಾಗಿದೆ. ಅದರ ಮುಂದಿನ ಹಂತದ ಹೂಡಿಕೆ ಆಶಾದಾಯಕವಾಗಿದ್ದು, ಸರಕಾರವು ಕಂಪೆನಿಗೆ ಅಗತ್ಯವಿರುವ ನೆರವು ನೀಡಲಿದೆ. ಈ ಸಮೂಹವು ರಾಜ್ಯದಲ್ಲಿ ಈಗಾಗಲೇ 1.30ಲಕ್ಷ ಕೋಟಿ ರೂ.ಬಂಡವಾಳ ಹೂಡಿದೆ ಎಂದು ವಿವರಿಸಿದರು.
ಬಾಟಲಿ ನೀರಿನ ಉತ್ಪಾದನೆಗೆ ಹೆಸರಾಗಿರುವ ಬಿಸ್ಲೆರಿ ಕಂಪೆನಿಯು ರಾಜ್ಯದಲ್ಲಿ ಹೆಚ್ಚಿನ ಹೂಡಿಕೆ ಮತ್ತು ತನ್ನ ಸಾಮಥ್ರ್ಯ ಹೆಚ್ಚಳವನ್ನು ಪರಿಗಣಿಸುತ್ತಿದೆ. ಇದು ಸಾಧ್ಯವಾದರೆ 2ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದನ್ನು ಗಮನದಲ್ಲಿ ಇಟ್ಟುಕೊಂಡು, ನೀರಿನ ಸಮೃದ್ಧಿ ಇರುವ ವಿಜಯಪುರ ಅಥವಾ ಚಾಮರಾಜನಗರ ಜಿಲ್ಲೆಯನ್ನು ಆಯ್ದುಕೊಳ್ಳಲು ಕೋರಲಾಗಿದೆ. ಇದೇ ರೀತಿಯಲ್ಲಿ ಜೀನ್ಸ್ ಬಟ್ಟೆ ಉತ್ಪಾದನೆಗೆ ಮನಸ್ಸು ಮಾಡಿರುವ ರೇಮಂಡ್ ಲೈಫ್ ಸ್ಟೈಲ್ ಲಿಮಿಟೆಡ್ ಕಂಪೆನಿಗೆ ಕಚ್ಚಾವಸ್ತು ಮತ್ತು ಮಾರುಕಟ್ಟೆ ಅನುಕೂಲಗಳ ಹಿನ್ನೆಲೆಯಲ್ಲಿ ಬಳ್ಳಾರಿ ಇಲ್ಲವೇ ವಿಜಯಪುರದಲ್ಲಿ ಹೂಡಿಕೆ ಮಾಡುವಂತೆ ಹೇಳಲಾಗಿದೆ ಎಂದು ಅವರು ತಿಳಿಸಿದರು.
ಎಲ್ ಅಂಡ್ ಟಿ ಕಂಪೆನಿಯು ಔದ್ಯಮಿಕ ರೋಬೋಟಿಕ್ಸ್ ವಲಯಕ್ಕೆ ಪ್ರವೇಶಿಸುವ ಉತ್ಸಾಹದಲ್ಲಿದ್ದು, ಬೆಂಗಳೂರಿನಲ್ಲಿ ಜಾಗತಿಕ ಮಾರುಕಟ್ಟೆಗೆ ಬೇಕಾಗುವ ಚಿಪ್ ವಿನ್ಯಾಸ ಸ್ಥಾವರವನ್ನು ಸ್ಥಾಪಿಸುವ ಚಿಂತನೆಯಲ್ಲಿದೆ. ಜತೆಗೆ ಅದು ಎಲೆಕ್ಟ್ರಾನಿಕ್ಸ್ ವಲಯಕ್ಕೆಂದೇ ಪ್ರತ್ಯೇಕ ಸಂಶೋಧನಾ ಮತ್ತು ನಾವೀನ್ಯತಾ ಪಾರ್ಕ್ ಸ್ಥಾಪಿಸುವ ಆಲೋಚನೆಯನ್ನೂ ಕಂಪನಿಯ ಪ್ರತಿನಿಧಿಗಳು ಹಂಚಿಕೊಂಡಿದ್ದಾರೆ. ಕಂಪನಿಯು ಇದರ ಬಗ್ಗೆ ತೀರ್ಮಾನಿಸಿದರೆ ಅದಕ್ಕೆ ಪೂರಕವಾಗಿ ಹೈವೋಲ್ಟೇಜ್ ಪರೀಕ್ಷಾ ಮತ್ತು ಎಲೆಕ್ಟ್ರಾನಿಕ್ ಟೆಸ್ಟಿಂಗ್ ಸೌಲಭ್ಯಕ್ಕೂ ಸರಕಾರ ನೆರವು ನೀಡಲಿದೆ ಎಂದು ಅವರು ನುಡಿದಿದರು.
ಟಾರ್ಕ್ ಸೆಮಿಕಂಡಕ್ಟರ್ಸ್ ಸಂಸ್ಥೆಯು ರಾಜ್ಯದಲ್ಲಿ ಸೆಮಿಕಂಡಕ್ಟರ್, ಡೇಟಾ ಸೆಂಟರ್ ಮತ್ತು ಎಐ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಆಸಕ್ತಿ ತೋರಿಸಿದೆ. ಜತೆಗೆ ನಮ್ಮಲ್ಲಿ ಕಾಂಪೌಂಡ್ ಸೆಮಿಕಂಡಕ್ಟರ್ ಫ್ಯಾಬ್ ಸ್ಥಾವರ ಸ್ಥಾಪಿಸಲು ಕಂಪನಿಗೆ ಮನಸ್ಸಿದೆ. ಎಫ್‍ಎಂಸಿಜಿ ವಲಯದಲ್ಲಿ ಹೆಸರು ಮಾಡಿರುವ ಟಿಸಿಪಿಎಲ್ ಪ್ಯಾಕೇಜಿಂಗ್ ಲಿ.ರಾಜ್ಯದಲ್ಲಿ ಫಿಲ್ಮ್ಸ್ ಮತ್ತು ಲ್ಯಾಮಿನೇಟ್ಸ್ ವಲಯದಲ್ಲಿ ನೆಲೆಯೂರಲು ನೋಡುತ್ತಿದೆ ಎಂದು ಅವರು ತಿಳಿಸಿದರು.
ಎಲ್ಲ ಹೂಡಿಕೆದಾರರ ಜತೆಗೂ ಹೆಚ್ಚಿನ ಹೂಡಿಕೆ, ಉತ್ಪಾದನೆ, ಉದ್ಯೋಗ ಸೃಷ್ಟಿ, ಸಂಶೋಧನೆ ಮತ್ತು ಅಭಿವೃದ್ಧಿ, ಡೇಟಾ ಸೆಂಟರುಗಳ ಸ್ಥಾಪನೆ, ನೀರು ಮತ್ತು ಭೂಮಿಯ ಲಭ್ಯತೆ ಇವುಗಳಿಗೆ ಒತ್ತು ಕೊಟ್ಟು ಮಾತುಕತೆ ನಡೆಸಲಾಯಿತು ಎಂದು ಅವರು ವಿವರಿಸಿದರು.
ಈ ವೇಳೆ ಟಾರ್ಕ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಡಾ.ನಿರಂಜನ್ ಹೀರಾನಂದಾನಿ, ಟಿಸಿಪಿಎಲ್ ಅಧ್ಯಕ್ಷ ಸಾಕೇತ್ ಕನೋರಿಯಾ, ಬಿಸ್ಲೆರಿ ಸಿಇಒ ಆಂಜೆಲೋ ಜಾರ್ಜ್, ರೇಮಂಡ್ ಪರವಾಗಿ ಸಮೂಹದ ನೂತನ ಉಪಕ್ರಮಗಳ ಮುಖ್ಯಸ್ಥ ಗಿರೀಶ್ ಅಡ್ವಾಣಿ, ಎಲ್ ಅಂಡ್ ಟಿ ಹಿರಿಯ ಉಪಾಧ್ಯಕ್ಷ ಅರುಣ್ ರಾಮಚಂದ್ರಾನಿ, ಸನೋಫಿ ಮುಖ್ಯಸ್ಥರಾದ ವಿರಳ್ ಷಾ ಮತ್ತು ರುಚಿರ್ ಷಾ ಭಾಗವಹಿಸಿದ್ದರು.