ಬೆಂಗಳೂರು : ‘ತುಳು ಭಾಷೆಗೆ ಕರ್ನಾಟಕ ರಾಜ್ಯದ 2ನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ವಿಚಾರದಲ್ಲಿ ರಾಜ್ಯ ಸರಕಾರ ಅತ್ಯಂತ ಗಂಭೀರವಾಗಿ ಚಿಂತನೆ ನಡೆಸುತ್ತಿದ್ದು, ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕ ಚೌಕಟ್ಟಿನೊಳಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪೂರಕ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.

ಮಂಗಳವಾರ ಈ ಕುರಿತು ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ತುಳು ಭಾಷೆಯ ಇತಿಹಾಸ, ಸಾಹಿತ್ಯ ಪರಂಪರೆ, ಲಿಪಿ, ಪ್ರಾಚೀನ ಮತ್ತು ಆಧುನಿಕ ಸಾಹಿತ್ಯ, ಸಂಸ್ಕೃ ತಿ ಹಾಗೂ ತುಳು ಶಾಸನಗಳ ಕುರಿತು ಸಮಗ್ರ ಅಧ್ಯಯನ ನಡೆಸಲು ಡಾ. ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ತಜ್ಞರ ಸಮಿತಿಯು 2023ರ ಫೆ.14ರಂದು ಸರಕಾರಕ್ಕೆ ವರದಿ ಸಲ್ಲಿಸಿದೆ ಎಂದು ತಿಳಿಸಿದ್ದಾರೆ.

ಅದರ ಮುಂದುವರಿದ ಹಂತವಾಗಿ, ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚುವರಿ ಅಥವಾ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವ ಮಾದರಿಗಳನ್ನು ಅಧ್ಯಯನ ಮಾಡಲು ನಮ್ಮ ಸರಕಾರವು 2025ರ ಜು.30ರಂದು ಅಧ್ಯಯನ ತಂಡವನ್ನು ರಚಿಸಿತ್ತು. ತಂಡವು 19 ಮತ್ತು 20 ಜನವರಿ 2026ರಂದು ಆಂಧ್ರಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಅಧಿಕೃತ ಭಾಷಾ ವ್ಯವಸ್ಥೆ, ಕಾನೂನು ಚೌಕಟ್ಟು ಹಾಗೂ ಅನುಷ್ಠಾನದ ಮಾದರಿಗಳನ್ನು ಪರಿಶೀಲಿಸಿ, 2026ರ ಮಾರ್ಚ್‍ನಲ್ಲಿ ಸರಕಾರಕ್ಕೆ ವರದಿ ಸಲ್ಲಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ತುಳು ನಮ್ಮ ಕರಾವಳಿಯ ಭಾಷೆ ಮಾತ್ರವಲ್ಲ. ಅದು ಕರ್ನಾಟಕದ ಶ್ರೀಮಂತ ಭಾಷಾ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗ. ತುಳು ಭಾಷೆಯ ಗೌರವ, ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸರಕಾರ ಸಂಪೂರ್ಣ ಬದ್ಧವಾಗಿದೆ. ಕಾನೂನಿನ ಚೌಕಟ್ಟಿನೊಳಗೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor