ದಸಂಸ ಪರ್ಯಾಯ ರಾಜಕಾರಣ ಕಟ್ಟುವುದು ಅನಿವಾರ್ಯ : ಎನ್.ವೆಂಕಟೇಶ್
ʼದಲಿತ ಸಾಹಿತ್ಯ ಮತ್ತು ಚಳವಳಿ-50 ಅಧ್ಯಯನʼ ಸಮಾರೋಪ ಸಮಾರಂಭ
ಬೆಂಗಳೂರು : ‘ದಲಿತ ಸಂಘರ್ಷ ಸಮಿತಿಯ ಒತ್ತಡ ಮತ್ತು ಸಹಕಾರದಿಂದಾಗಿ ಕಾಂಗ್ರೆಸ್ ಪಕ್ಷವು ಜನರ ಸಮಸ್ಯೆಗಳಿಗೆ ಸ್ವಲ್ಪ ಸ್ಪಂದನೆ ನೀಡುತ್ತಿದೆ. ಆದರೆ, ದಲಿತ ಸಂಘರ್ಷ ಸಮಿತಿ ಪರ್ಯಾಯ ರಾಜಕೀಯ ಶಕ್ತಿಯನ್ನು ಕಟ್ಟಬೇಕಾದ ಅನಿವಾರ್ಯ ಸಂದರ್ಭ ಸೃಷ್ಟಿಯಾಗಿದೆ’ ಎಂದು ಹಿರಿಯ ದಲಿತ ಹೋರಾಟಗಾರ ಎನ್.ವೆಂಕಟೇಶ್ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ವೆಂಕಟಗಿರಿಗೌಡ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಹಾಗೂ ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಿದ್ದ ದಲಿತ ಸಾಹಿತ್ಯ ಮತ್ತು ಚಳವಳಿ-50 ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪರ್ಯಾಯ ರಾಜಕೀಯ ಶಕ್ತಿಯಾಗಬೇಕಿದ್ದರೆ ಯುವಜನರು ದಲಿತ ಚಳವಳಿಯನ್ನು ಮುನ್ನಡೆಸಬೇಕು. ತನ್ನದೇ ಆದ ಪ್ರಣಾಳಿಕೆ ಇಲ್ಲದೇ ಇರುವುದರಿಂದ ದಲಿತ ಸಂಘರ್ಷ ಸಮಿತಿ ರಾಜಕೀಯ ಶಕ್ತಿಯಾಗಿ ಬೆಳೆಯಲು ಸಾಧ್ಯವಾಗಿಲ್ಲ.ಹೀಗಾಗಿ ಒಂದು ಪ್ರಣಾಳಿಕೆ ತಯಾರಿಸಬೇಕಾಗಿದೆ ಎಂದು ವೆಂಕಟೇಶ್ ಹೇಳಿದರು.
ದಲಿತ ಸಂಘರ್ಷ ಸಮಿತಿಯ ಪ್ರದಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ‘ದಲಿತ ಸಂಘರ್ಷ ಸಮಿತಿಯ ಕಾಲ ಮುಗಿದು ಹೋಗಿಲ್ಲ. ಅದರ ಟಿಸಿಲಾಗಿ ಬಿವಿಎಸ್ ಹುಟ್ಟಿಕೊಂಡಿತ್ತು. ಆದರೆ, ಡಿಎಸ್‍ಎಸ್ ಮತ್ತು ಬಿವಿಎಸ್ ಪರಸ್ಪರ ಅರ್ಥ ಮಾಡಿಕೊಂಡು ಮುಂದಕ್ಕೆ ಹೋಗಿದ್ದರೆ ಒಳ್ಳೆಯದಿತ್ತು ಎಂದು ತಿಳಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಎಂಬ ಘಟಸರ್ಪ ನಮ್ಮ ಮುಂದೆ ಬಂದು ನಿಂತಿದೆ. ಧರ್ಮಾಧಾರಿತವಾದ ಪ್ರಭುತ್ವ ನಡೆಯುತ್ತಿದೆ. ಪ್ರಾದೇಶಿಕವಾಗಿ ಕೋಮುವಾದಿ ನೀತಿಯೊಂದಿಗೆ ಜಾಗತೀಕರಣ ಕೆಲಸ ಮಾಡುತ್ತಿದೆ. ಇದನ್ನು ಎದುರಿಸುವ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಮಾವಳ್ಳಿ ಶಂಕರ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಪ್ರೊ.ಎಲ್.ಎನ್.ಮುಕುಂದರಾಜ್, ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ಕವಿ ಸುಬ್ಬು ಹೊಲೆಯಾರ್, ಲೇಖಕಿ ದು.ಸರಸ್ವತಿ, ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಡಿ.ಡೊಮಿನಿಕ್, ಸಾಹಿತ್ಯ ಅಕಾಡಮಿ ಸದಸ್ಯ ರವಿಕುಮಾರ್ ಬಾಗಿ, ಲೇಖಕಿ ಪಿ.ಚಂದ್ರಿಕಾ ಮತ್ತಿತರರು ಉಪಸ್ಥಿತರಿದ್ದರು.