ನೆಲಮಂಗಲ | ಆಯಿಲ್ ಗೋದಾಮಿನಲ್ಲಿ ಬೆಂಕಿ ಅವಘಡ; ಕೋಟ್ಯಂತರ ರೂ. ನಷ್ಟ
Update: 2025-05-13 09:45 IST
ನೆಲಮಂಗಲ: ಶಾರ್ಟ್ ಸರ್ಕ್ಯೂಟ್ ನಿಂದ ಆಯಿಲ್ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದು ಕೋಟ್ಯಾಂತರ ರೂ. ಮೌಲ್ಯದ ಉತ್ಪನ್ನಗಳು ಬೆಂಕಿಯಿಂದ ಹಾನಿಯಾದ ಘಟನೆ ನೆಲಮಂಗಲ ಸಮೀಪದ ಅಡಕಿಮಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೃಷ್ಣಪ್ಪ ಎಂಬವರಿಗೆ ಸೇರಿದ 33 ಸಾವಿರ ಚದರ ಅಡಿ ವಿಸ್ತೀರ್ಣವುಳ್ಳ ಬೃಹತ್ ಗೋದಾಮು ಬೆಂಕಿಗೆ ಆಹುತಿಯಾಗಿದ್ದು, ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಸುಮಾರು 10-12 ಅಗ್ನಿ ಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದ್ದು, ನೆಲಮಂಗಲ, ಪೀಣ್ಯ ಹೆಬ್ಬಾಳ, ರಾಜಾಜಿನಗರ, ಥಣಿಸಂದ್ರ, ಸುಂಕದಕಟ್ಟೆ ಮತ್ತು ಯಶವಂತಪುರ ಅಗ್ನಿಶಾಮಕ ಠಾಣಾ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.