ಕೆಪಿಎಸ್ಸಿ ಅಧ್ಯಕ್ಷರ ಮೇಲೆ ಕ್ರಮ ಜರುಗಿಸುವಂತೆ ಧರಣಿ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ(ಕೆಪಿಎಸ್ಸಿ) ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಮತ್ತು ಆಯೋಗ ಕಾರ್ಯದರ್ಶಿ ಹುದ್ದೆಯಲ್ಲಿ ಕೆ.ಎಸ್. ಲತಾಕುಮಾರಿ ಅವರನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿ ಉದ್ಯೋಗ ಅಕಾಂಕ್ಷಿಗಳು ಗುರುವಾರದಂದು ಇಲ್ಲಿನ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಿದರು.
ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ತಮ್ಮ ಸಾಂವಿಧಾನಿಕ ಹುದ್ದೆಯ ದುರುಪಯೋಗ ಮಾಡಿಕೊಂಡು ಎಲ್ಲ ನೇಮಕಾತಿ ಪ್ರಕ್ರಿಯೆಗಳ ವಿಳಂಬಕ್ಕೆ ಕಾರಣೀಭೂತರಾಗಿದ್ದಾರೆ. ಅವರ ಈ ವಿಳಂಬ ಧೋರಣೆಯಿಂದ ರಾಜ್ಯದ ಲಕ್ಷಾಂತರ ಆಕಾಂಕ್ಷಿಗಳ ಉದ್ಯೋಗ ಪಡೆಯುವ ಕನಸಿಗೆ ಭಂಗವನ್ನುಂಟು ಮಾಡಿದೆಯಲ್ಲದೆ, ಅವರ ಜೀವನದ ಮುಂದಿನ ಹಾದಿಯ ಬಗ್ಗೆ ನಿರಾಶಾ ಮನೋಭಾವ ಉಂಟುಮಾಡಿದೆ ಎಂದು ಉದ್ಯೋಗ ಅಕಾಂಕ್ಷಿಗಳು ಆರೋಪಿಸಿದರು.
ಅಭ್ಯರ್ಥಿಗಳು ಹಲವು ಬಾರಿ ಅಧ್ಯಕ್ಷರನ್ನು ಭೇಟಿಯಾಗಿ ವಿಳಂಬಗೊಂಡಿರುವ ನೇಮಕಾತಿ ಪಟ್ಟಿಗಳನ್ನು ಹಾಗೂ ಹೊಸ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸುವಂತೆ ಮತ್ತು ಕಾರ್ಯದರ್ಶಿಗೆ ಸಹಕಾರ ನೀಡುವಂತೆ ಮನವಿ ಮಾಡಿಕೊಂಡಿದ್ದರೂ ಅಧ್ಯಕ್ಷರು ಸ್ಪಂದಿಸಿರುವುದಿಲ್ಲ. ಕೆಪಿಎಸ್ಸ್ಸಿಯಲ್ಲಿ ಹಗ್ಗಜಗ್ಗಾಟ ರಾಜ್ಯ ಸರಕಾರಕ್ಕೂ ಮುಜುಗರ ಉಂಟುಮಾಡಿದೆ. ಅಲ್ಲದೆ ಹಲವಾರು ನೇಮಕಾತಿಗಳು ಕೆಲವು ತಿಂಗಳುಗಳಿಂದ ನನೆಗುದಿಗೆ ಬಿದ್ದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಲು ಆಯೋಗದ ಅಧ್ಯಕ್ಷರ ಸಹಿಯ ಅವಶ್ಯಕತೆ ಇರುತ್ತದೆ. ಆದರೆ ಅಧ್ಯಕ್ಷರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಸಾಂವಿಧಾನಿಕ ಹುದ್ದೆಯನ್ನು ದುರುಪಯೋಗ ಮಾಡಿಕೊಂಡು ಅದನ್ನು ಅಧಿಸೂಚಿಸಲು ಸಹಕಾರ ನೀಡುತ್ತಿಲ್ಲ. ಆದುದರಿಂದ ಒಂದು ನಿರ್ದಿಷ್ಟ ಕಾಲಮಿತಿಯನ್ನು ನಿಗದಿಪಡಿಸಿ ಅಧ್ಯಕ್ಷರ ಮೇಲೆ ಕ್ರಮ ಕೈಗೊಂಡು ಅಭ್ಯರ್ಥಿಗಳ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಧರಣಿನಿರತ ಉದ್ಯೋಗ ಅಕಾಂಕ್ಷಿಗಳು ಮನವಿ ಮಾಡಿದರು.