ಸಂವಿಧಾನ ಸಮಾವೇಶ ಕಣ್ತುಂಬಿಕೊಂಡ ಯುವ ವರ್ಗ..!
ಬೆಂಗಳೂರು : ಭಾರತದ ಸಂವಿಧಾನವನ್ನು ಅಂಗೀಕರಿಸಿದ 75ನೆ ವರ್ಷದ ಸ್ಮರಣಾರ್ಥವಾಗಿ ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಎರಡು ದಿನಗಳ ಕಾಲ ಆಯೋಜಿಸಿರುವ ‘ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶ’ದಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರರು ಯುವಕ-ಯುವತಿಯರು ಪಾಲ್ಗೊಂಡು ಸಂವಿಧಾನ ಬಗೆಗಿನ ಮಾಹಿತಿ ಪಡೆದರು.
ಶನಿವಾರ ನಗರದ ಅರಮನೆ ಮೈದಾನದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ್ದ ‘ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶ’ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಆನಂತರ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿಯವರು ಸಂವಿಧಾನದ 75 ವರ್ಷಗಳ ಸ್ಮರಣಾರ್ಥ ವಿಶೇಷ ಹೊದಿಕೆಯನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಪರಿಷತ್ತಿನ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಮುನ್ನುಡಿಯನ್ನು ಓದುವ ಮೂಲಕ ಸಭಿಕರನ್ನು ಮುನ್ನಡೆಸಿದರು. ಇದೇ ವೇಳೆ ಚಾಮರಾಜನಗರದ ಪುಟ್ಟ ಬಾಲಕ ತೇಜಸ್ ಚಕ್ರವರ್ತಿ, ಸಂವಿಧಾನ ದಾಖಲೆಯ ಮುಖ್ಯ ಭಾಗಗಳನ್ನು ಓದುವ ಮೂಲಕ ಎಲ್ಲರ ಗಮನ ಸೆಳೆದರು.
ಈ ಕುರಿತು ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಒಂದು ತಿಂಗಳಲ್ಲಿ ರಾಜ್ಯ ಸರಕಾರವು ಸಂವಿಧಾನದ ಬಗ್ಗೆ ನಾಗರಿಕರ ಜಾಗೃತಿಯನ್ನು ಹೆಚ್ಚಿಸುವ ಹಲವಾರು ಉಪಕ್ರಮಗಳನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಪೂರ್ವಭಾವಿಯಾಗಿ ಎಲ್ಲ ಜಿಲ್ಲೆಗಳಲ್ಲಿ ಜನವರಿ 26ರಿಂದ ಫೆಬ್ರವರಿ 23ರವರೆಗೆ 1,025 ವಿಶೇಷ ಕಾರ್ಯಕ್ರಮ ನಡೆಸಿದ್ದು, 5,600 ಗ್ರಾಮ ಪಂಚಾಯಿತಿಗಳು, 50 ಕೋಷ್ಟಕಗಳಲ್ಲಿ ನಮ್ಮ ಸಂವಿಧಾನ ಜಾಗೃತಿ ಅಭಿಯಾನ ನಡೆಸಿದೆ ಎಂದು ಮಾಹಿತಿ ನೀಡಿದರು.
ಇನ್ನೂ, ತುಮಕೂರು, ದಾವಣಗೆರೆ, ಮೈಸೂರು, ಕೊಡಗು, ಬಳ್ಳಾರಿ ಜಿಲ್ಲೆಗಳಲ್ಲಿ ಸಂವಿಧಾನ ಅಭಿಯಾನವನ್ನು ಅತ್ಯುತ್ತಮ ನಡೆಸಿದ ಕಾರಣಕ್ಕೆ ಮುಖ್ಯಮಂತ್ರಿಗಳು ಬಹುಮಾನ ಮತ್ತು ಸ್ಮರಣಿಕೆಗಳನ್ನು ವಿತರಿಸಿದರು.